39 ಕೆರೆಗಳ ಪೈಕಿ 34 ಕೆರೆಗಳಿಗೆ ನೀರು; ಸಚಿವ ಸತೀಶ ಜಾರಕಿಹೊಳಿ ಹಾಗೂ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಪ್ರಯತ್ನಕ್ಕೆ ಫಲ
ರಾಯಬಾಗ 17 : ಲೋಕೋಪಯೋಗಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ಕೆರೆ ತುಂಬಿಸುವ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, 39 ಕೆರೆಗಳ ಪೈಕಿ ಈಗಾಗಲೇ 34 ಕೆರೆಗಳಿಗೆ ನೀರು ಹರಿಸಲಾಗಿದೆ. ಉಳಿದ ಐದು ಕೆರೆಗಳಿಗೂ ಶೀಘ್ರದಲ್ಲೇ ನೀರು ಹರಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಲೋಕೋಪಯೋಗಿ ಸಚಿವರ ಆಪ್ತಸಹಾಯಕ ಶಿವನಗೌಡ ಪಾಟೀಲ ಹೇಳಿದರು.
ಲೋಕೋಪಯೋಗಿ ಸಚಿವ ಸತೀಶ ಅಣ್ಣಾ ಜಾರಕಿಹೊಳಿ ಅವರ ನಿರ್ದೇಶನದ ಮೇರೆಗೆ ಮಾವಿನಹೊಂಡ ಹಾಗೂ ದೇವನಕಟ್ಟಿ ಗ್ರಾಮದ ಕೆರೆಗಳಿಗೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಗಾಗಿ ಮೂರು ಪಂಪ್ಸೆಟ್ ಮೋಟಾರ್ಗಳನ್ನು ಅಳವಡಿಸಲಾಗಿದ್ದು, ಪ್ರಸ್ತುತ ಎರಡು ಮೋಟಾರ್ಗಳು ಕಾರ್ಯನಿರ್ವಹಿಸುತ್ತಿವೆ. ಮೂರನೇ ಮೋಟಾರ್ನ್ನು ಚಾಲನೆ ಮಾಡಿದಾಗ ತಾಂತ್ರಿಕ ಕಾರಣದಿಂದ ಟ್ರಿಪ್ ಆಗುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.
ಈ ಕಾರಣದಿಂದ ಶಾಹುಪಾರ್ಕ ಮೀರಾಪುರಟ್ಟಿ ಹಾಗೂ ನಂದಿಕುರಳಿ ಸೇರಿದಂತೆ ಉಳಿದ ಕೆರೆಗಳಿಗೆ ಇನ್ನೂ ನೀರು ಹರಿಸಲು ಸಾಧ್ಯವಾಗಿಲ್ಲ. ತಾಂತ್ರಿಕ ಸಮಸ್ಯೆ ಪರಿಹರಿಸಿ ಶೀಘ್ರದಲ್ಲೇ ಎಲ್ಲಾ ಕೆರೆಗಳಿಗೂ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದರು. ಪ್ರಸ್ತುತ ಎರಡು ಪಂಪ್ಸೆಟ್ಗಳ ಮೂಲಕ 25 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಹಿಪ್ಪರಗಿ ಬ್ಯಾರೇಜ್ನ ಒಟ್ಟು 6 ಟಿಎಂಸಿ ಸಾಮರ್ಥ್ಯದಲ್ಲಿ ಈಗಾಗಲೇ 5 ಟಿಎಂಸಿ ನೀರು ಸಂಗ್ರಹವಾಗಿದ್ದು, ಮುಂದಿನ ಆರು ತಿಂಗಳುಗಳವರೆಗೆ ಕೆರೆಗಳಿಗೆ ನೀರು ಹರಿಸಿದರೂ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜ್ಯೋತಿ ಕೆಂಪಟ್ಟಿ, ಹಾಜಿ ಮುಲ್ಲಾ, ಸಿದ್ರಾಮ ಪೂಜಾರಿ, ಅನೀಲ ಪಾಟೀಲ, ದೀಲೀಪ ಜಮಾದಾರ, ವಸಂತ ಕರಿಗಾರ, ಎಲ್.ಎಸ್. ಪಾಟೀಲ, ಅಬ್ದುಲ್ ತಾಂಬಟ್, ಮಾರುತಿ ನಾಯಿಕ, ನಾಮದೇವ ಕಾಂಬಳೆ, ಭೀಮಪ್ಪ ಕುಲಕುಡೆ, ಮಲಗೌಡ ಪಾಟೀಲ, ಮಾದೇವ ಕಂಕನವಾಡಿ, ಅರುಣ ಪೂಜೇರಿ, ಮಲಕಾರಿ ಕೊಂಟ್ರೆ, ಸುನೀಲ್ ಸಿಂಧೆ, ಲಕ್ಷ್ಮಣ ಮನುಗುತ್ತಿ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.