ಬಳ್ಳಾರಿ

ರಸ್ತೆ ಸುರಕ್ಷತಾ ಮಾಸಾಚರಣೆ ನಿಮಿತ್ತ ವಾಕಥಾನ್

ರಸ್ತೆ ಸುರಕ್ಷತಾ ಮಾಸಾಚರಣೆ ನಿಮಿತ್ತ ವಾಕಥಾನ್

ಬಳ್ಳಾರಿ 21: 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ನಿಮಿತ್ತ ಜಿಲ್ಲಾ ಪೊಲೀಸ್ ವತಿಯಿಂದ ಗುರುವಾರ ವಾಕ್‍ಥಾನ್ ನಡೆಯಿತು.

ನಗರದ ಕನಕದುರ್ಗಮ್ಮ ದೇವಸ್ಥಾನದ ಆವರಣದಿಂದ ಆರಂಭವಾದ ವಾಕ್‍ಥಾನ್ ರಾಯಲ್ ಸರ್ಕಲ್ ಮಾರ್ಗವಾಗಿ ಬೆಂಗಳೂರು ರಸ್ತೆ,ಬ್ರೂಸ್ ಪೇಟೆ ಪೋಲಿಸ್ ಠಾಣೆ ಮಾರ್ಗವಾಗಿ ಎಚ್.ಆರ್.ಗವಿಯಪ್ಪ ವೃತ್ತದವರೆಗೆ ನಡೆಯಿತು. ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು ಈ ವಾಕ್‍ಥಾನದಲ್ಲಿ ಭಾಗವಹಿಸಿದ್ದರು. ವಾಕ್‍ಥಾನ ಸಂದರ್ಭದಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಫಲಕಗಳು ಹಾಗೂ ಸಂದೇಶಗಳು ಗಮನ ಸೆಳೆದವು.

ವಾಕ್‍ಥಾನ್ ನಂತರ ಎಚ್.ಆರ್.ಗವಿಯಪ್ಪ ವೃತ್ತದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಮಾತನಾಡಿ,  ಪ್ರತಿಯೊಬ್ಬರ ಜೀವ ಅಮೂಲ್ಯ;ತಮ್ಮ ಹಿಂದೆ ತಮ್ಮನ್ನೇ ನಂಬಿಕೊಂಡ ಕುಟುಂಬವಿದೆ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯವಹಿಸದೇ ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಅವರು ಮನವಿ ಮಾಡಿದರು.

ಬಳ್ಳಾರಿ ನಗರದಲ್ಲಿ ಪ್ರತಿ ವರ್ಷ 1 ಸಾವಿರ ಅಪಘಾತಗಳಾಗುತ್ತಿದ್ದು,ಅವುಗಳಲ್ಲಿ 300 ಜನರು ಸಾವಿಗಿಡಾಗುತ್ತಿದ್ದಾರೆ  ಇದು ದೊಡ್ಡ ದುರಂತ ಎಂದು ಹೇಳಿದ ಬಳ್ಳಾರಿ ಶಾಸಕ ಸೋಮಶೇಖರರೆಡ್ಡಿ ಅವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡಿವೈಎಸ್ಪಿಗಳಾದ ರಮೇಶ,ಸತ್ಯನಾರಾಯಣ, ಆರ್‍ಟಿಒ ಶೇಖರ್ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.ಕಮಲಾಪುರ ಪೊಲೀಸ್ ಠಾಣೆಯಲ್ಲಿ: ಕಮಲಾಪುರ ಪೊಲೀಸ್ ಠಾಣೆ ವತಿಯಿಂದ ಗುರುವಾರ ಏರ್ಪಡಿಸಿದ್ದ ವಾಕ್‍ಥಾನ್‍ಗೆ ಡಿವೈಎಸ್ಪಿ ಕಾಶಿಗೌಡ ಅವರು ಚಾಲನೆ ನೀಡಿದರು.

ಕಮಲಾಪುರದಿಂದ ಆರಂಭಗೊಂಡ ವಾಕ್‍ಥಾನ್ ಹಂಪಿಯ ಎದುರು ಬಸವಣ್ಣವರೆಗೆ ನಡೆಯಿತು. ಡಿವೈಎಸ್ಪಿ ಕಾಶಿಗೌಡ ಅವರು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಕರೆ ನೀಡಿದರು.

ಈ ವಾಕ್‍ಥಾನದಲ್ಲಿ ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಇದ್ದರು. ಕಮಲಾಪುರ ಠಾಣೆಯ ಪಿಎಸ್‍ಐ ಶಶಿಧರ್, ಹಂಪಿ ಠಾಣೆಯ ರಾಮಣ್ಣ ನಾಯಕ್ ಹಾಗೂ ಹಂಪಿ ಸಂಚಾರಿ ಠಾಣೆಯ ಸಿಬ್ಬಂದಿ ಇದ್ದರು.

ಸುದ್ದಿ ಓದಿ