ಹೊಸಪೇಟೆ

ಮತದಾನ ಜಾಗೃತಿ ಅಭಿಯಾನ

ಮತದಾನ ಜಾಗೃತಿ ಅಭಿಯಾನ

ಹೊಸಪೇಟೆ 18: ವಿಜಯನಗರ ನಾಗರೀಕ ವೇದಿಕೆ, ವಿನಾಯಕನಗರ ಕ್ಷೇಮಾಭಿವೃದ್ಧಿ ಸಂಘ, ನಿವೃತ್ತ  ಪೊಲೀಸ್ ಅಧಿಕಾರಿಗಳ ಸಂಘ ಹಾಗೂ ಶಿವಜ್ಯೋತಿ ಬಡಾವಣೆ ಕ್ಷೇಮಾಭಿವೃದ್ಧಿ ವತಿಯಿಂದ ನಗರದಲ್ಲಿ ಮತದಾನ ಜಾಗೃತಿ ಅಭಿಯಾನವನ್ನು ನಡೆಸಲಾಯಿತು. ಸಂಘದ ಪದಾಧಿಕಾರಿಗಳು ಪುನೀತ್ ರಾಜ್ ಕುಮಾರ್ ಸರ್ಕಲ್ನಿಂದ ಮತಮಾರಿಕೊಂಡರೆ ಮನೆ ಮಗಳನ್ನು ಮಾರಿಕೊಂಡಂತೆ ಎಂಬ ಡಾ.ಬಿ.ಆರ್.ಅಂಬೇಡ್ಕರ್, ರವರ ಸಂದೇಶ, ಕಳಬೇಡ ಕೊಲಬೇಡ, ಮತದಾನ ಮರಿಬೇಡ, ಜಾಗೃತ ಮತದಾರ ರಾಷ್ಟ್ರದ ನೇತಾರ ಎಂಬ ಘೋಷಣೆಗಳ ಮೂಲಕ ತಹಶೀಲ್ದಾರ್ ಕಛೇರಿಗೆ ಆಗಮಿಸಿ ತಹಶೀಲ್ದಾರರ ಜೊತೆಗೂಡಿ ಮತದಾನ ಜಾಗೃತಿ ಅಭಿಯಾನಕ್ಕೆ ಕೈಜೋಡಿಸಿದರು.   

ವಿಜಯನಾಗರೀಕ ವೇದಿಕೆ ಅಧ್ಯಕ್ಷ ವೈ.ಯಮುನೇಶ್ ಅವರು ಮಾತನಾಡಿ ರಾಜ್ಯದಲ್ಲಿ ಮೇ.10ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು ಆ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯಿಂದ ಹೆಚ್ಚಿನ ಮತದಾರರರು ಮತದಾನದಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ. ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ಪವಿತ್ರವಾದ ಮತದಾನದ ಹಕ್ಕನ್ನು ಚಲಾಯಿಸಬೇಕು. ಉತ್ತಮ ನಾಡುಕಟ್ಟಲು ಮತದಾನ ಮಾಡುವ ಮೂಲಕ ನಾಳಿನ ಪೀಳಿಗೆಯನ್ನು ಸಂರಕ್ಷಿಸುವ ಹೊಣೆಗಾರಿಕೆ ಮತದಾರರ ಮೇಲಿದೆ ಮತದಾನ ಕೇವಲ ರಾಜಕೀಯ ಪ್ರಕೀಯೇ ಮಾತ್ರವಲ್ಲ ಅದು ಒಂದು ಪ್ರಜ್ಞಾವಂತ ನಾಗರೀಕರ ಕರ್ತವ್ಯವಾಗಿದೆ. ವಿಶೇಷವಾಗಿ ವಿದ್ಯಾವಂತರು, ಆರ್ಥಿಕವಾಗಿ ಅನುಕೂಲ ಸ್ಥಿತಿಯಲ್ಲಿರುವವರು ಮತದಾನದ ದಿನ ಬಿಸಿಲಿನ ನೆಪ ಒಡ್ಡಿ ಮನೆಯಲ್ಲಿ ಕೂರದೆ ಮತಗಟ್ಟೆಗೆ ಬಂದು ಮತಚಲಾಯಿಸಬೇಕು ಹಾಗೂ ತಮ್ಮ ಒಂದು ಮತದಿಂದ ಏನು ಬದಲಾವಣೆ ಮಾಡಲು ಸಾಧ್ಯ? ಎಂಬ ನಕಾರಾತ್ಮಕ ಚಿಂತನೆಯನ್ನು ಬದಿಗಿತ್ತು ಕಡ್ಡಾಯವಾಗಿ ಮತದಾನ ಮಾಡಬೇಕು. ಪ್ರಜಾ ಪ್ರಭುತ್ವದಲ್ಲಿ ಮತದಾನ ಒಂದು ದಿವ್ಯ ಶಕ್ತಿ ಹಾಗೂ ಮತದಾನವು ಸರ್ವರಿಗೂ ನ್ಯಾಯ ಮತ್ತು ಸಮಾನತೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಜೆಗಳು ತಮ್ಮ ಮತ ಚಲಾಯಿಸಬೇಕು ಎಂದರು. ನಂತರ ವಿನಾಯಕ ನಗರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿಗಳಾದ ಯು.ಆಂಜನೇಯಲು ಮಾತನಾಡಿ ನಾವು ಯಾವುದೇ ಜಾತಿ ಧರ್ಮದ ಆಮಿಷಕ್ಕೆ ಒಳಗಾಗದೆ ಜಾಗೃತರಾಗಿ ಮತಚಲಾಯಿಸಬೇಕಿದೆ. ಕೇವಲ ಒಂದೆರೆಡು ದಿನಗಳ ಖರ್ಚಿಗೆ ಕುಟುಂಬ ನಿರ್ವಹಣೆಗೆ ಆಗುವಷ್ಟು ಪುಡಿಗಾಸನ್ನು ಕೊಟ್ಟು, ಮತದಾನದ ಹಕ್ಕನ್ನು ಖರೀದಿಸುವ ರಾಜಕೀಯ ವ್ಯವಸ್ಥೆಯನ್ನು ಅಂತ್ಯಗೊಳಿಸಬೇಕಿದೆ. ಸಮರ್ಥ ಅಭ್ಯರ್ಥಿಗೆ ಮತನೀಡಿ. ಭ್ರಷ್ಟಾಚಾರ ರಹಿತ ಆಡಳಿತ ವ್ಯವಸ್ಥೆಗೆ ಮತದಾರರು ಶ್ರಮಿಸಬೇಕಿದೆ ಎಂದು ಕರೆ ನೀಡಿದರು. 

ಶಿರಸ್ಥೆದಾರ ಶ್ರೀಧರ್ ಹಾಗೂ ವಿವಿಧ ಸಂಘಟನೆಗಳ ಮುಖಂಡ ಎಂ.ಕುಮಾರಸ್ವಾಮಿ, ಹೆಚ್.ತಿಪ್ಪೇಸ್ವಾಮಿ, ಎಸ್.ಟಿ.ಮುಂಡರಗಿ, ಶಿವಶಂಕ್ರಪ್ಪ, ಸೂರ್ಯನಾರಾಯಣ, ಎಲ್.ಜಿ.ಲಕ್ಷ್ಮಣ್ ನಾಯ್ಕ್, ರಾಮಾಲಿ, ಜಗನ್ನಾಥ, ಬಿ.ಟಿ.ಮರಿಯಪ್ಪ, ಎಂ.ಶ್ರೀನಿವಾಸ್, ಬಿ.ಜಹಂಗೀರ್, ಎಂ.ಶಂಕ್ರಪ್ಪ, ನಜೀರ್ಸಾಬ್, ವೆಂಕಟೇಶ್, ಬಿ.ವಿರುಪಾಕ್ಷಪ್ಪ, ಮೊಹಮ್ಮದ್ಬಾಷ, ಸುರೇಶ, ರೇಣೇಶ್, ಶಿವಾನಂದ ಕಬ್ಬೇರ್ ಮುಂತಾದವರು ಉಪಸ್ಥಿತರಿದ್ದರು 

ಸುದ್ದಿ ಓದಿ