ಕಾರವಾರ

ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ವೇಗವಾಗಿ ಸಾಗುತ್ತಿದೆ: ಜಿಲ್ಲಾಧಿಕಾರಿ

ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ವೇಗವಾಗಿ ಸಾಗುತ್ತಿದೆ: ಜಿಲ್ಲಾಧಿಕಾರಿ

ಲೋಕದರ್ಶನ ವರದಿ 

ಕಾರವಾರ 01 :- ಜಿಲ್ಲೆಯಲ್ಲಿ  ಪ್ರಸ್ತುತ 1445 ಮತಗಟ್ಟೆಗಳಿದ್ದು, ಕೆಲವು ಮತಗಟ್ಟೆಗಳಲ್ಲಿ 1200 ಕ್ಕೂ ಅಧಿಕ ಮತದಾರರು ಇರುವುದರಿಂದ ಮತಗಟ್ಟೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಹೇಳಿದರು.  

ಅವರು ಶನಿವಾರ , ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ , ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತಂತೆ ಜಿಲ್ಲೆಯಲ್ಲಿ ಇದುವರೆಗಿನ ಪ್ರಗತಿ ಕುರಿತಂತೆ ಜಿಲ್ಲೆಯ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಿದರು. 

 ಜಿಲ್ಲೆಯಲ್ಲಿ  ಹಳಿಯಾಳದಲ್ಲಿ 13, ಕಾರವಾರದ 8, ಕುಮಟಾದ 11, ಭಟ್ಕಳದ 22, ಶಿರಸಿಯ 15 ಮತ್ತು ಯಲ್ಲಾಪುರದ 10 ಮತಗಟ್ಟೆಗಳು ಸೇರಿದಂತೆ ಒಟ್ಟು 79 ಮತಗಟ್ಟೆಗಳಲ್ಲಿ 1200 ಕ್ಕೂ ಅಧಿಕ ಮತದಾರರಿದ್ದು, ಈ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತಗಟ್ಟಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕಾಗಿದ್ದು ಇದರಿಂದ ಜಿಲ್ಲೆಯಲ್ಲಿ ಮತಗಟ್ಟೆಗಳ ಸಂಖ್ಯೆ 1524 ಕ್ಕೆ ಏರಿಕೆ ಆಗಲಿದೆ ಎಂದರು. 

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತ ಜಿಲ್ಲೆಯ ಇದುವರೆಗೆ ಪ್ರಗತಿಯ ಮಾಹಿತಿಯನ್ನು ರಾಜಕೀಯ ಪಕ್ಷಗಳಿಗೆ ವಿತರಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಯಾವುದೇ ಗೊಂದಲಗಳಿದ್ದಲ್ಲಿ ತಮ್ಮ ಪಕ್ಷಗಳ ಬಿ.ಎಲ್‌.ಎ ಗಳ ಮೂಲಕ ಮತ್ತೊಮ್ಮೆ ಪರೀಶೀಲನೆ ಮಾಡಿಕೊಂಡು ದೃಢಪಡಿಸಿಕೊಳ್ಳುವಂತೆ ತಿಳಿಸಿದರು. 

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಬಿ.ಜೆ.ಪಿ ಪಕ್ಷದ ಉಪಾಧ್ಯಕ್ಷ ಸಂಜಯ್ ಸಾಳುಂಕೆ, ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಬಾಬು ಶೇಖ್, ಪ್ರತಿನಿಧಿ ಸಯ್ಯದ್ ಅಶ್ರಫ್, ಜಿಲ್ಲಾ ಚುನಾವಣಾ ಶಾಖೆಯ ಅಧಿಕಾರಿಗಳು ಇದ್ದರು. 


ಸುದ್ದಿ ಓದಿ