ಮಹಲಿಂಗಪುರ

ವಿಠ್ಠಲ ರುಕ್ಮಿಣಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ

ವಿಠ್ಠಲ ರುಕ್ಮಿಣಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ

ಮಹಾಲಿಂಗಪುರ 05: ಸ್ಥಳೀಯ ಬುದ್ನಿ ಪಿಡಿ ಬಡಾವಣೆಯ 7 ಶತಮಾನಗಳ ಐತಿಹಾಸಿಕ ವಿಠ್ಠಲ ರುಕ್ಮಿಣಿ ಮಂದಿರದಲ್ಲಿ ಶನಿವಾರ ಬೆಳಿಗ್ಗೆ 10.26 ಕ್ಕೆ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಜರುಗಿತು. 

ಮಾಘ ಮಾಸ ಷಷ್ಠಿ ಶನಿವಾರ ಮಾ. 3ರ ಬೆಳಿಗ್ಗೆ 5 ರಿಂದ ಹೋಮ, ಹವನ, ಪುನೇಚನ, ಆರತಿಯೊಂದಿಗೆ ಫಂಡರಾಪುರ ಶಿಲ್ಪಿ ನಿತಿನ್ ನಿರ್ಮಿತ 3.3 ಅಡಿ ಎತ್ತರದ ವಿಠ್ಠಲ, 2.11 ಅಡಿ ಎತ್ತರದ ರುಕ್ಮಿಣಿ ಹಾಗೂ ಆಂಜನೇಯ, ಜ್ಞಾನದೇವ, ತುಕಾರಾಮರ ಸುಂದರ ಮೂರ್ತಿಗಳಿಗೆ ಸಾವಳಗಿಯ ಸಂತ ರಾಜು ಜೋಶಿ ಪ್ರಾಣ ಪ್ರತಿಷ್ಠಾಪನೆ ಮಾಡಿದರು ನಂತರ 1 ಗಂಟೆ ಕಾಲ ವಿಠ್ಠಲ ರುಕ್ಮಿಣಿಗೆ ವಡೆವೆ, ವಸ್ತ್ರ, ಹೂವಿನ ಹಾರ ಮುಂತಾದ ಶೃಂಗಾರ ಕಾರ್ಯ ಜರುಗಿತು. ಸಕಲ ಸಂತರು ಮತ್ತು ಮತ್ತೈದೆಯರಿಂದ ಮಹಾಮಂಗಳಾರತಿ ನಂತರ ಮಹಾಪ್ರಸಾದ ಜರುಗಿತು.  

ದೇವಸ್ಥಾನದ ಜೀರ್ಣೋದ್ಧಾರ ಮತ್ತು ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ಕೆ ನಿರಂತರ ಶ್ರಮಿಸಿದ ಸಂತ ಸತ್ಯಪ್ಪ ಚಿಕ್ಕೂರ, ಸಂತ ಮೌನೇಶ ಬಡಿಗೇರ, ಅರ್ಚಕಿ ಬೇಬವ್ವ ರಾಮಚಂದ್ರ ಯಾದವಾಡ, ಗೌಡಪ್ಪಗೌಡ ಪಾಟೀಲ, ವಿಠ್ಠಲಗೌಡ ಬಿ.ಪಾಟೀಲ, ಸದಾಶಿವ ಶೆಗುಣಸಿ, ಮಲ್ಲಪ್ಪ ಅಂಬಣ್ಣಗೋಳ, ಕುಮಾರ ಪವಾರ, ರಾಜಶೇಖರ ಮಾಯಪ್ಪಗೋಳ, ಶಿವಯ್ಯ ಮಠಪತಿ ಇವರನ್ನು  ಶ್ರೀಮಂತ ಒಂಟಗೋಡಿ ನೇತೃತ್ವದಲ್ಲಿ ಸನ್ಮಾನಿಸಲಾಯಿತು. 

ಇದಕ್ಕೂ ಮುನ್ನ ಶುಕ್ರವಾರ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಹಾಗೂ ಫಂಡರಪುರ ಶಿವುರಕರ ಶಾಖೆಯ ಕೃಷ್ಣ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನೂತನ ಮೂರ್ತಿಗಳ ಪೂಜೆ, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ, ಕುಂಭಮೇಳ ಮತ್ತು ಕೀರ್ತನೆ, ಭಜನೆ, ಜಾಗರಣೆ ಮುಂತಾದ ಧಾರ್ಮಿಕ ಕಾರ್ಯಗಳು ಜರುಗಿದವು. 


ಸುದ್ದಿ ಓದಿ