ಪಂಚಮಸಾಲಿ ಹೋರಾಟಗಾರರಿಂದ ನ್ಯಾಯಾಲಯದ ಆದೇಶ ಉಲ್ಲಂಘನೆ : ಬೆಳಗಾವಿ ಜಿಲ್ಲಾಡಳಿತದ ಸ್ಪಷ್ಟನೆ
ಬೆಳಗಾವಿ : ಪಂಚಮಸಾಲಿ ಹೋರಾಟಗಾರರು ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡುವ ಮೂಲಕ ರಾಷ್ಟ್ರೀಯ ಹೆದ್ದಾರಿ ತಡೆದು ಹಾಗೂ ಸುವರ್ಣ ಸೌಧಕ್ಕೆ ನುಗ್ಗಲು ಯತ್ನಿಸಿ, ಪೊಲೀಸ ವಾಹನಗಳ ಮೇಲೆ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಸರಿದೋಗಿಸಲು ಪೊಲೀಸರು ಕ್ರಮಕ್ಕೆ ಮುಂದಾದರು ಎಂದು ಬೆಳಗಾವಿ ಜಿಲ್ಲಾಡಳಿತವು ಸ್ಪಷ್ಟನೆ ನೀಡಿದೆ.
ಮಂಗಳವಾರ ರಾತ್ರಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಅವರು, ಪಂಚಮಸಾಲಿ ಮೀಸಲಾತಿ ಹೋರಾಟಗಾರು ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಬಲ ಪ್ರಯೋಗ ಮಾಡಬೇಕಾದ ಅನಿವಾರ್ಯತೆ ಬಂತು ಎಂದು ಹೇಳಿದರು.
ಪಂಚಮಸಾಲಿ ಮೀಸಲಾತಿ ಹೋರಾಟದ ಕುರಿತು ಕಳೆದ ಎರಡೂ ದಿನಗಳ ಹಿಂದೆ ಅರ್ಜಿ ಬಂದಿದ್ದ ಹಿನ್ನೆಲೆಯಲ್ಲಿ ಅವರಿಗೆ ಜಿಲ್ಲಾಡಳಿತದಿಂದ ಕೆಲವೊಂದು ಸೂಚನೆ ನೀಡಲಾಗಿತ್ತು. ಆದರೆ ಹೈರ್ಕೋಟ್ ಆದೇಶದಂತೆ ಕಾನೂನು ಸುವ್ಯವಸ್ಥೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಬಂದ್ ಮಾಡದಂತೆ ಸ್ಪಷ್ಟವಾಗಿ ತಿಳಿಸಿದರೂ ಹೋರಾಟಗಾರರು ಜಿಲ್ಲಾಡಳಿತಕ್ಕೆ ಸಹಕರಿಸಲಿಲ್ಲ ಎಂದು ಹೇಳಿದರು.
ಪಂಚಮಸಾಲಿ ಸಮಾಜದವರು ಬೆಳಗಾವಿ ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ಅವರು ಆಯ್ಕೆ ಮಾಡಿದ ಸ್ಥಳದಲ್ಲಿ ಹೋರಾಟ ಮಾಡಬಹದುದೀತ್ತು. ಅಲ್ಲದೆ ಪಂಚಮಸಾಲಿ ಹೋರಾಟಗಾರರು ಬೆಳಗಾವಿ ನಗರದಲ್ಲಿ ಬರಬಹುದಾಗಿತ್ತು. ಆದರೆ ಟ್ರ್ಯಾಕ್ಟರ್ ತರದೆ ಶಾಂತಿಯುತ ಹೋರಾಟ ನಡೆಸಬೇಕು ಎಂದು ಹೈಕೋರ್ಟ್ ಆದೇಶ ಮಾಡಿತ್ತು. ನ್ಯಾಯಾಲಯದ ಆದೇಶ ಪಾಲಿಸಿದ್ದೇವೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಜಿಲ್ಲಾಡಳಿತದ ಕರ್ತವ್ಯವಾಗಿದೆ ಎಂದರು.
ಇದೇ ವೇಳೆ ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ ಅವರು ಮಾತನಾಡಿ, ಸುವರ್ಣ ವಿಧಾನಸೌಧದ ಎದುರಿನ ಕೊಂಡುಸಕೊಪ್ಪದ ಬಳಿ ಪಂಚಮಸಾಲಿ ಮೀಸಲಾತಿ ಹೋರಾಟದ ಪ್ರತಿಭಟನೆಯಲ್ಲಿ ನ್ಯಾಯಾಲಯದ ಆದೇಶದಂತೆ ನಾವು ಕಾನೂನು ಸುವ್ಯವಸ್ಥೆ ಕಾಪಾಡಿದ್ದೇವೆ.
ಟ್ರ್ಯಾಕ್ಟರ್ ರ್ಯಾಲಿ ನಡೆಸುತ್ತೇವೆ ಎಂದಾಗ ಪಂಚಮಸಾಲಿ ಮುಖಂಡರಿಗೆ ದೂರವಾಣಿ ಕರೆ ಮಾಡಿದ್ದು ನಿಜ. ಆದರೆ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ್ದು ತಪ್ಪು ಎಂದರು.
ಬಳಿಕ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸ ಇಲಾಖೆಯ ಕರ್ತವ್ಯವಾಗಿತ್ತು. ರಾಘವೇಂದ್ರ ಬಡಾವಣೆಯಲ್ಲಿ ಪ್ರತಿಭಟನೆ ಮಾಡಿ ಎಂದು ಹೇಳಿದ್ದರು ಕೊಂಡುಸಕೊಪ್ಪದಲ್ಲಿ ಪ್ರತಿಭಟನೆ ಮಾಡುದಾಗಿ ಸ್ವಾಮೀಜಿ ಹೇಳಿದರು.
ಅದಕ್ಕೆ ಅನುಮತಿ ನೀಡಿದ್ದೇವು. ಬೆಳಗಾವಿ ಸುವರ್ಣ ವಿಧಾನಸೌಧದ ಮುಂಭಾಗದ ಚನ್ನಮ್ಮ ಮೂರ್ತಿ ಮಾಲಾರ್ಪಣೆಗೆ ಹತ್ತು ಜನಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಅವರು ಹತ್ತು ಸಾವಿರ ಜನ ಸೌಧಕ್ಕೆ ಹೊರಡಲು ಮುಂದಾಗಿದ್ದರು. ಆಗ ಏಕಾಏಕಿ ಕಲ್ಲು ತೂರಾಟ ನಡೆಸಿದ ಹಿನ್ನೆಲೆಯಲ್ಲಿ 14 ಪೊಲೀಸರು ಗಂಭೀರವಾಗಿ ಗಾಯವಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 70 ರಿಂದ 80 ಜನ ಹೋರಾಟಗಾರರನ್ನು ವಶಕ್ಕೆ ಪಡೆಯಲಾಗಿದೆ. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಿದ್ದೇವೆ ಎಂದರು.ಘಟನೆಯಲ್ಲಿ ನಮ್ಮ ಪೊಲೀಸ್ ಇಲಾಖೆಯ ವಾಹನ ಸೇರಿದಂತೆ ನಾಲ್ಕು ಸಾರಿಗೆ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಿದರು.
ಎಸ್ ಪಿ ಡಾ. ಭೀಮಾಶಂಕರ ಗುಳೇದ್ ಅವರು ಮಾತನಾಡಿ, ಪಂಚಮಸಾಲಿ ಹೋರಾಟಗಾರರು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರು. ಆದರೆ ನ್ಯಾಯಾಲಯ ಸೂಚಿಸಿದ ಆದೇಶವನ್ನು ತಾವೇ ಪಾಲಿಸದೆ ಉಲ್ಲಂಘನೆ ಮಾಡಿದ್ದಾರೆ. ಅವರಿಗೆ ಬೇಕಾದಂತೆ ಎಲ್ಲ ಪ್ರತಿಭಟನೆ ಗೆ ಜಿಲ್ಲಾಡಳಿತ ಎಲ್ಲ ಸೌಕರ್ಯ ನೀಡಿತ್ತು ಆದರೆ ರಾಷ್ಟ್ರೀಯ ಹೆದ್ದಾರಿ ತಡೆದು ಪೊಲೀಸರ ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎಂದು ತಿಳಿಸಿದರು.