ಮಹಲಿಂಗಪುರ

ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆಲ್ಲುಬೇಕು : ಪೃಥ್ವಿ ಕನಸು

ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆಲ್ಲುಬೇಕು : ಪೃಥ್ವಿ ಕನಸು

ಹಳ್ಳಿಯ ಪ್ರತಿಭೆ ಪೃಥ್ವಿ ಬ್ಯಾಕೋಡ ರಾಷ್ಟ್ರಮಟ್ಟಕ್ಕೆ ಆಯ್ಕೆ  

*ನಾರನಗೌಡ ಉತ್ತಂಗಿ 

ಮಹಾಲಿಂಗಪುರ : ಸಾಧನೆಗೆ ವಯಸ್ಸು, ಪ್ರದೇಶ, ಲಿಂಗ ಯಾವುದೂ ಮುಖ್ಯವಲ್ಲ, ಸಾಧಿಸಬೇಕೆಂಬ ಛಲ ಮತ್ತು ತಕ್ಕ ಪ್ರತಿಭೆ ಇದ್ದರೆ ಎಲ್ಲಿದ್ದರೂ, ಹೇಗಿದ್ದರೂ ಸಾಧಿಸಬಹುದೆಂಬುದಕ್ಕೆ ಹಳ್ಳಿಯ ಪ್ರತಿಭೆ ಪೃಥ್ವಿ ರಾಷ್ಟ್ರಮಟ್ಟದವರೆಗೆ ಬೆಳೆದು ನಿಂತು ಮಾಡಿದ ಸಾಧನೆಯೇ ಸಾಕ್ಷಿ . 

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕುಗ್ರಾಮ ಕೆಸರಗೊಪ್ಪ ಗ್ರಾಮದ 14 ವರ್ಷದ ಬಾಲೆ 8ನೇ ತರಗತಿ ವಿದ್ಯಾರ್ಥಿನಿ ಪೃಥ್ವಿ ಧರೆಪ್ಪ ಬ್ಯಾಕೋಡ ತನ್ನ ನಿರಂತರ ಶ್ರಮ, ಅಚಲ ಛಲದಿಂದಾಗಿ ತಾನು ಓದುತ್ತಿರುವ ತರಗತಿಯಲ್ಲಿ ಎಂದೂ ನಂಬರ್ ಒನ್ ಸ್ಥಾನ ಬಿಟ್ಟುಕೊಡದ ಛಲಗಾತಿ ಈಗ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್‌ಗೆ ಆಯ್ಕೆಯಾಗಿ ಇಡೀ ರಾಷ್ಟ್ರ ಕುಗ್ರಾಮದತ್ತ ತಿರುಗಿ ನೋಡುವಂತೆ ಮಾಡಿದ್ದಾಳೆ.  

ಅ.16 ರಿಂದ 19ರವರೆಗೆ ಆಂಧ್ರದ ಗುಂಟೂರಿನಲ್ಲಿ ಜರುಗುವ ರಾಷ್ಟ್ರೀಯ ಜ್ಯೂನಿಯರ್ ಚಾಂಪಿಯನ್‌ಶಿಪ್ 35ನೇ ಸೌಥ್ ಜೋನ್ ಕ್ರೀಡಾಕೂಟದ 60 ಮೀ.ಓಟ, 600 ಮೀ.ಓಟ, ಎತ್ತರ ಜಿಗಿತ ಈ ಮೂರು ವಿಭಾಗದ ಟ್ರಯಥ್ಲಾನ್ ‘ಸಿ’ ವಿಭಾಗದಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾಳೆ. 

ಅದೇ ರೀತಿ ಅ.24ರಿಂದ 29ರವರೆಗೆ ಓಡಿಸ್ಸಾದ ಭುವನೇಶ್ವರದಲ್ಲಿ ಜರುಗಲಿರುವ 39ನೇ ರಾಷ್ಟ್ರೀಯ ಜೂನಿಯರ್ ಚಾಂಪಿಯನ್‌ಶಿಪ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಲ್ಲದೇ ಅ.6ರಿಂದ 10ರವರೆಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದ ಸಿಬಿಎಸ್‌ಇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 200ಮೀ. ಮತ್ತು 800ಮೀ ಓಟದಲ್ಲಿ ಭಾಗವಹಿಸಿ 800ಮೀ.ಓಟದಲ್ಲಿ 5ನೇ ಸ್ಥಾನ ಗಳಿಸಿ ಭರವಸೆ ಮೂಡಿಸಿ ಗಮನ ಸೆಳೆದಿದ್ದಾಳೆ. 

ತನ್ನ ವಯಸ್ಸಿನ 4ನೇ ವರ್ಷದಿಂದಲೇ ಓದು ಮತ್ತು ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಂಡ ಪೃಥ್ವಿ ನಿತ್ಯ ಬೆಳಿಗ್ಗೆ 4.30ರಿಂದ 5.30ರವರೆಗೆ ಓದಿನ ನಂತರ ಸೈಕ್ಲಿಂಗ್ ಅಥವಾ ರನ್ನಿಂಗ್ ಮೂಲಕ 3.5ಕಿ.ಮೀ.ದೂರದ ಕೆಸರಗೊಪ್ಪ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಆವರಣಕ್ಕೆ ತಲುಪಿ ನಿರಂತರ ರನ್ನಿಂಗ್, ಜಿಮ್, ಸೈಕ್ಲಿಂಗ್, ಸ್ವಿಮ್ಮಿಂಗ್ ಮುಂತಾದ ಅಭ್ಯಾಸ ಮಾಡಿ ಇಂದಿನ ಮಕ್ಕಳು ಮತ್ತು ಯುವಕರಿಗೆ ಮಾದರಿಯಾಗಿರುವ ಪೃಥ್ವಿ ಮುಂದೆ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕ ಗೆಲ್ಲುವ ಕನಸು ಹೊಂದಿದ್ದಾಳೆ. 

ಅಂತಾರಾಷ್ಟ್ರೀಯ ಆಟಗಾರ ಬಿ.ಜಿ.ನಾಗರಾಜ, ತಾಲೂಕು ಅಥ್ಲೆಟಿಕ್ಸ್‌ ಅಸೋಷಿಯೇಷನ್ ಕಾರ್ಯದರ್ಶಿ ಶಿವಾನಂದ ಮಾಳಿ, ಜಿಲ್ಲಾ ಅಸೋಷಿಯೇಷನ್ ಕಾರ್ಯದರ್ಶಿ ಯಲಗನ್ನವರ, ಮಹಾಂತೇಶ ಬಳ್ಳಾರಿ, ಯಲ್ಲಪ್ಪ ಭರಮನ್ನವರ, ಸಂಗಮೇಶ ಮುಕಾರ್ತಿಹಾಳ, ಶಿವಯ್ಯ ಮಠಪತಿ, ಯಲ್ಲಪ್ಪ ಜಗದಾಳ, ಮಹಾಲಿಂಗ ಮಾದರ, ಸದಾಶಿವ ಕುರಿ  ಮಾರ್ಗದರ್ಶನ ಮತ್ತು ಪ್ರೋತ್ಸಾಹವೇ ಕಾರಣ ಎಂದು ಸಾಧಕಿ ಪೃಥ್ವಿಯ ತಂದೆ ಪ್ರೌಢ ಶಾಲಾ ಶಿಕ್ಷಕ ಧರೆಪ್ಪ ಬ್ಯಾಕೋಡ, ತಾಯಿ ಪ್ರಾಥಮಿಕ ಶಾಲಾ ಶಿಕ್ಷಕಿ ಸವಿತಾ ಹೇಳುತ್ತಾರೆ. ಬಾಲಕಿ ಪೃಥ್ವಿಯ ಸಾಧನೆಗೆ ಅಭಿನಂದನೆ ಹಾಗೂ ಹಾರೈಕೆಗಳ ಮಹಾಪೂರವೇ ಹರಿದು ಬರುತ್ತಿದೆ. 


ಸುದ್ದಿ ಓದಿ