ವಿಕಸಿತ ಭಾರತ ಸಂಕಲ್ಪ ಯಾತ್ರೆ ಯಶಸ್ವಿ: ವೈ.ಎಂ.ಸತೀಶ್
ಬಳ್ಳಾರಿ,ಜ.08: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಜನರಿಗೂ ತಲುಪಿಸುವ ನಿಟ್ಟಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ ಎಂದು ವಿಧಾನಪರಿಷತ್ ಶಾಸಕ ವೈ.ಎಂ.ಸತೀಶ್ ಅವರು ಹೇಳಿದರು.
ಕುರುಗೋಡು ತಾಲ್ಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಬಾದನಹಟ್ಟಿ ವತಿಯಿಂದ ಇತ್ತೀಚಿಗೆ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ನಾಗರೀಕರ ಅಭಿವೃದ್ಧಿಗೆ ನೂರಾರು ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳ ಲಾಭವನ್ನು ಪಡೆದ ಫಲಾನುಭವಿಗಳು ದೇಶದ ಪ್ರತಿ ಮನೆಯಲ್ಲೂ ಇದ್ದಾರೆ, ಕೇಂದ್ರ ಸರ್ಕಾದ ಯೋಜನೆಗಳು ಸಮಾಜದ ಕಟ್ಟ ಕಡೆಯ ನಾಗರೀಕರಿಗೂ ತಲುಪಿಸುವುದೇ ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದರು.
ಕೇಂದ್ರದ ಸರ್ಕಾರದ ಮುದ್ರಾಯೋಜನೆ, ಜನಧನ್ ಯೋಜನೆ, ಪಿ.ಎಂ ವಿಶ್ವಕರ್ಮ ಯೋಜನೆ, ಉಜ್ವಲ ಯೋಜನೆ, ಕೃಷಿ ಸಮ್ಮಾನ್ ಯೋಜನೆ, ಅನ್ನ ಭಾಗ್ಯ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಮಾಹಿತಿ ಎಲ್ಇಡಿ ಪರದೆಯ ವಾಹನಗಳ ಮೂಲಕ ಗ್ರಾಪಂ ಹಾಗೂ ನಗರ ಪ್ರದೇಶದಲ್ಲಿ ಸಂಚರಿಸಿ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಡ್ರೋನ್ನಂತಹ ಸುಧಾರಿತ ತಂತ್ರಜ್ಞಾನದ ಬಳಕೆಯಾಗಬೇಕು. ನ್ಯಾನೋ ಯೂರಿಯಾ ಮತ್ತು ಇತರ ಕೀಟನಾಶಕಗಳನ್ನು ಸಿಂಪಡಿಸಲು ಕೈಗೆಟುಕುವ ದರದಲ್ಲಿ ರೈತರಿಗೆ ದೊರೆಯುತ್ತಿದೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು ಸಾರ್ವಜನಿಕರಿಗೆ ಸಮರ್ಕವಾಗಿ ತಲುಪಿಸುವ ಮೂಲಕ ಅರಿವು ಮೂಡಿಸಬೇಕು ಎಂದರು.
ನಬಾರ್ಡ್ನ ವ್ಯವಸ್ಥಾಪಕ ನಿರ್ದೇಶಕ ಯುವರಾಜ್ ಕುಮಾರ್ ಅವರು ಮಾತನಾಡಿ, ಕೆಸಿಸಿ, ಪಿಎಂಜೆಜೆಬಿವೈ, ಪಿಎಂಎಸ್ಬಿವೈ, ಎಪಿವೈ, ಪಿಎಂ ಸ್ವಾನಿಧಿ, ಪಿಎಂ ವಿಶ್ವಕರ್ಮ, ಮುದ್ರಾ ಯೋಜನೆ, ಉಜ್ವಲಾ ಯೋಜನೆ ಮುಂತಾದ ಎಲ್ಲಾ ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಮಾತನಾಡಿ, ಸರ್ಕಾರಿ ಮತ್ತು ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಲು ಎಲ್ಲಾ ನಾಗರಿಕರು ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಕಾರ್ಡ್ ಪಡೆಯಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಟಿಬಿ ನಿರ್ಮೂಲನಾ ಕಾರ್ಯಕ್ರಮದಡಿ ಫಲಾನುಭವಿಗಳ ಪೌಷ್ಟಿಕಾಂಶದ ವೆಚ್ಚಗಳಿಗಾಗಿ ಮಾಸಿಕ ರೂ.500 ಗಳನ್ನು ಡಿಬಿಟಿ ಮೂಲಕ ನೀಡಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರತಿಜ್ಞಾವಿಧಿ ಭೋದಿಸಲಾಯಿತು. ಕೇಂದ್ರ ಸರ್ಕಾರದಿಂದ ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಮಾಹಿತಿಯ ಕಿರುಪುಸ್ತಕ ಹಾಗೂ 2024 ರ ಕ್ಯಾಲೆಂಡರ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಭಾರಿ ಜಿ.ಗೋಪಾಲಕೃಷ್ಣ, ಉಕ್ಕು ಸಚಿವಾಲಯದ ಉಪ ಕಾರ್ಯದರ್ಶಿ ಜಿ.ಪಿ.ಅಧ್ಯಕ್ಷ ಸಿದ್ದೇಶ್, ಎಲ್ಡಿಎಂ ಸೋಮನಗೌಡ ಐನಾಪೂರ ಸೇರಿದಂತೆ ಗ್ರಾಪಂ ಅಧ್ಯಕ್ಷರು, ಸದಸ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.