ಮಹಲಿಂಗಪುರ

ಆತ್ಮವಿಶ್ವಾಸದಿಂದ ಮಾತ್ರ ಗೆಲುವನ್ನು ನಮ್ಮದಾಗಿಕೊಳ್ಳಬಹುದು: ಮುಲ್ಲಾ

ಆತ್ಮವಿಶ್ವಾಸದಿಂದ ಮಾತ್ರ ಗೆಲುವನ್ನು ನಮ್ಮದಾಗಿಕೊಳ್ಳಬಹುದು: ಮುಲ್ಲಾ

ಮಹಾಲಿಂಗಪುರ 17: ಸಮಯಪಾಲನೆ ಮತ್ತು ಆತ್ಮವಿಶ್ವಾಸದಿಂದ ಮಾತ್ರ ಗೆಲುವನ್ನು ನಮ್ಮದಾಗಿಕೊಳ್ಳಬಹುದು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಎಸ್‌.ಎಮ್‌.ಮುಲ್ಲಾ ಹೇಳಿದರು. 

ಸ್ಥಳೀಯ ಜೆಸಿ ಶಾಲೆಯ 10 ನೇತರಗತಿ ವಿದ್ಯಾರ್ಥಿಗಳೊಂದಿಗೆ ಫಲಿತಾಂಶ ಸುಧಾರಣೆ ಬಗ್ಗೆ ಸಂವಾದ ನಡೆಸಿ ಮಾತನಾಡಿದ ಅವರು, ನಾನು ಫೇಲಾಗುತ್ತೇನೆ ಅಥವಾ ಉತ್ತಮ ಅಂಕ ಗಳಿಸಲು ಸಾಧ್ಯವಿಲ್ಲ ಎಂದು ನಕಾರಾತ್ಮಕ ಮನೋಭಾವ ನಿಮ್ಮದಾಗಿದ್ದರೆ, ನಿಮ್ಮನ್ನು ಉತ್ತೀರ್ಣ ಮಾಡುವುದು ಅಥವಾ ನಿಮಗೆ ಉತ್ಕೃಷ್ಠ ಫಲಿತಾಂಶ ನೀಡುವುದು ಆ ಸೃಷ್ಠಿಕರ್ತ ಬ್ರಹ್ಮನಿಂದಲೂ ಸಾಧ್ಯವಿಲ್ಲ. ಶ್ರೀಕೃಷ್ಣ ಪರಮಾತ್ಮ ಹೇಳಿದಂತೆ ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಎಂಬ ಮಾತನ್ನು ನಂಬಿ ನಿಮ್ಮ ಕರ್ಮ ನೀವು ಮಾಡುತ್ತಾ ಸಾಗಿ, ನಕಾರಾರಾತ್ಮಕ ಚಿಂತನೆ ಮತ್ತು ಮನೋಭಾವಗಳಿಂದ ದೂರವಿದ್ದು ಸಾಧಿಸಿಯೇ ತೀರುತ್ತೇನೆಂಬ ಅಚಲ ನಂಬಿಕೆಯಿಂದ ಕಾರ್ಯಪ್ರವೃತ್ತರಾದರೆ ನೀರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯ, ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆಗೆ ಈಗ ಉಳಿದಿರುವ 67 ದಿನಗಳು ಕೇವಲವಲ್ಲ, ನಿನ್ನೆಯ ಬಗ್ಗೆ ಚಿಂತಿಸದೆ, ನಾಳೆಯ ಬಗ್ಗೆ ಯೋಚಿಸದೇ ಇಂದಿನ ದಿನವನ್ನು ಸದುಪಯೋಗ ಪಡಿಸಿಕೊಳ್ಳಿ, ಸಮಯವನ್ನು ಗೌರವಿಸುವವನನ್ನು ಸರ್ವವೂ ಗೌರವಿಸುತ್ತದೆ. ಈಗಲೂ ಕಾಲ ಮಿಂಚಿಲ್ಲ ಉತ್ತಮ ಯೋಜನೆಯೊಂದಿಗೆ ಸಿದ್ಧತೆ ಮಾಡಿಕೊಂಡರೆ ಅತ್ಯುತ್ತಮ ಫಲಿತಾಂಶ ಪಡೆಯಲು ಇದು ಸಕಾಲ ಎಂದರು. 

ಸ್ವಾಮಿ ವಿವೇಕಾನಂದರ ಮಾತನ್ನು ಪ್ರಸ್ತಾಪಿಸಿದ ಅವರು, ನಿನ್ನ ಗೆಲುವು ನೀನು ನಿನ್ನ ಮೇಲಿಟ್ಟಿರುವ ನಂಬಿಕೆಯಿಂದ ಮಾತ್ರ ಸಾಧ್ಯ. ನಿನ್ನ ತಂದೆ ತಾಯಿ , ಗುರು, ಸ್ನೇಹಿತರು ಕೇವಲ ಬೆಂಬಲ ನೀಡಬಲ್ಲರು ಮತ್ತು ನೀನು ಗೆದ್ದಾಗ ಚಪ್ಪಾಳೆ ತಟ್ಟಬಲ್ಲರು, ಆದ್ದರಿಂದ ಗೆಲ್ಲಬೇಕಾಗಿರುವುದು ನೀನೇ ಎಂಬುದನ್ನು ನೆನಪಿಟ್ಟು ಓದಿದರೆ ಯಶಸ್ಸು ನಿಮ್ಮದಾಗುತ್ತದೆ,  

ಎಸ್‌ಎಸ್‌ಎಲ್‌ಸಿ ಪ್ರತಿ ವಿದ್ಯಾರ್ಥಿಯ ಜೀವನದ ಪ್ರಮುಖ ಘಟ್ಟ, ನಿಮ್ಮ ಗುರಿಯ ಹೆದ್ದಾರಿ ಸೇರಲು ರಹದಾರಿ, ಇದುವರೆಗೆ ನೀವು ಪ್ರಯಾಣಿಸಿದ ಜಿಗ್ ಜಾಗ್ ರಸ್ತೆ ಇಲ್ಲಿಗೆ ಮುಕ್ತಾಯಗೊಂಡು ಹೈವೇ ಸೇರುತ್ತದೆ. ಯಾವ ಹೈವೇ ಸೇರಬೇಕೆಂಬುದು ಇಂದಿನ ನಿಮ್ಮ ಕರ್ಮದ ಮೇಲೆ ನಿಂತಿದೆ ಎಂದರು. 


ಸುದ್ದಿ ಓದಿ