ಬಳ್ಳಾರಿಯ ವಿವಿಧೆಡೆ ದಾಳಿ:06 ಬಾಲಕಾರ್ಮಿಕರ ರಕ್ಷಣೆ
ಬಳ್ಳಾರಿ 19: ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ, ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೋಲಿಸ್ ಇಲಾಖೆ ಮತ್ತು ಬಿಡಿಡಿಎಸ್ ಚೈಲ್ಡ್ ಲೈನ್ ಸಹಯೋಗದೊಂದಿಗೆ ನಗರದ ವಿವಿಧೆಡೆ ಗುರುವಾರ ಆಕಸ್ಮಿಕ ದಾಳಿ ನಡೆಸಿ 06 ಬಾಲಕಾರ್ಮಿಕ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳನ್ನು ಪೋಷಕರಿಗೆ ಒಪ್ಪಿಸಲಾಗಿದೆ.
ಮಾಲೀಕರ ವಿರುದ್ದ ಬಾಲಕಾರ್ಮಿಕ ಕಾಯ್ದೆ ಹಾಗೂ ಬಾಲನ್ಯಾಯ ಕಾಯ್ದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಬಳ್ಳಾರಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ನಗರದ ತಾಳೂರು ರಸ್ತೆ, ರೇಣುಕ ನಗರ, ಎಸ್ಪಿ ಸರ್ಕಲ್ ಮತ್ತು ವಿವಿಧ ಸ್ಥಳಗಳಲ್ಲಿ ಗ್ಯಾರೇಜ್, ಬೇಕರಿ, ಶಾಮಿಯಾನ ಸ್ಲೆಯರ್ಸ, ಮೆಕ್ಯಾನಿಕ್ ಶಾಪ್ ಇತ್ಯಾದಿ ಅಂಗಡಿ ಉದ್ದಿಮೆಗಳ ಮೇಲೆ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇದ ಮತ್ತು ನಿಯಂತ್ರಣ) ಕಾಯ್ದೆ 1986 ರಡಿಯಲ್ಲಿ ನೇಮಕವಾದ ಟಾಸ್ಕ್ ಪೋರ್ಸ್ ಸಮಿತಿ ಅಧಿಕಾರಿಗಳೊಂದಿಗೆ ಆಕಸ್ಮಿಕ ದಾಳಿ ನಡೆಸಲಾಗಿದೆ.
ಈ ದಾಳಿಯ ಸ್ಥಳಗಳಲ್ಲಿ ಎಲ್ಲಾ ಮಾಲೀಕರಿಗೆ ಬಾಲಕಾರ್ಮಿಕ ಕಾಯ್ದೆ ಜಾಗೃತಿಗಾಗಿ ಕರಪತ್ರ ಮತ್ತು ಪೋಸ್ಟರ್‌ಗಳನ್ನು ವಿತರಿಸಲಾಯಿತು.
ಈ ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ಕಾರ್ಮಿಕ ಅಧಿಕಾರಿಗಳಾದ ಕಮಲ್ ಅಲ್ತಾಫ್ ಅಹಮದ್, ಕಾರ್ಮಿಕ ನೀರೀಕ್ಷಕರಾದ ಎಂ. ರವಿದಾಸ್ , ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ಎ. ಮೌನೇಶ್, ರಾ.ಬಾ.ಯೋ. ಉಮೇಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರ್ತಿಕ್ ಮತ್ತು ಚಂದ್ರಕಲಾ ಮತ್ತು ರಜಿನಿ, ಚೈಲ್ಡ್ ಲೈನ್ ಸಿಬ್ಬಂದಿ ಹಾಗೂ ತಂಬಾಕು ನಿಯಂತ್ರಣ ಕೋಶದ ಭೋಜರಾಜ, ಸಮಾಜ ಕಾರ್ಯಕರ್ತರು ಹಾಜರಿದ್ದರು.