ಆರೋಗ್ಯದಲ್ಲಿ ಸಿರಿಧಾನ್ಯಗಳ ಬಳಕೆ ಕಾರ್ಯಕ್ರಮ
ಹಗರಿಬೊಮ್ಮನಹಳ್ಳಿ 27: ತಾಲೂಕಿನ ಮೋರೀಗೇರಿ ಗ್ರಾಮದಲ್ಲಿ ಬಿಂದುಸ್ವರೂಪ ಜ್ಞಾನವಿಕಾಸ ಕೇಂದ್ರದವರು ಆಯೋಜಿಸಿದ್ದ ಆರೋಗ್ಯಕ್ಕೆ ಸಿರಿಧಾನ್ಯಗಳ ಬಳಕೆ ಕಾರ್ಯಕ್ರಮ ಜರುಗಿತು.
ಈ ಸಂಧರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ಯೋಜನಾಧಿಕಾರಿ ಎಚ್.ಎಸ್. ರವೀಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿನ ಪ್ರಸ್ತುತ ದಿನಮಾನಗಳಲ್ಲಿನ ನೆಮ್ಮದಿ ಇಲ್ಲದ ಜೀವನ ಕೆಲಸದ ಒತ್ತಡ ಇನ್ನಿತರೆ ಒತ್ತಡಗಳ ನಿವಾರಣೆಗೆ ಪ್ರತಿಯೊಬ್ಬರೂ ಸಿರಿಧಾನ್ಯಗಳ ಬಳಕೆ ಮಾಡುವ ಅವಶ್ಯಕತೆ ಇದೆ, ಆರೋಗ್ಯ ಸಮಸ್ಯೆ ತೀವ್ರವಾಗುತ್ತಿದ್ದು, ಕಾಳಜಿ ವಹಿಸುವ ಅಗತ್ಯವಿದೆ. ಕ್ರೀಯಾಶೀಲ ಬದುಕಿನ ಜೊತೆಗೆ ಉತ್ತಮ ಆಹಾರ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ದೈಹಿಕ ಮಾನಸಿಕ ಸಧೃಡತೆಗೆ ಸಮತೋಲನ ಆಹಾರ ಸೇವನೆ ಮುಖ್ಯವಾದುದು. ಚಿಕ್ಕ ವಯಸ್ಸಿನಲ್ಲಿಯೇ ಮದುಮೇಹ, ರಕ್ತದೊತ್ತಡ, ಸ್ತ್ರೀಯರ ಆರೋಗ್ಯ ಸಮಸ್ಯೆಗಳು ಖಿನ್ನತೆಗೆ ತಳ್ಳುತ್ತಿವೆ. ಪ್ರತಿಯೊಬ್ಬರಿಗೆ ಆರೋಗ್ಯದ ಅರಿವು ಅಗತ್ಯವಿದ್ದು, ಪಾರಂಪರಿಕ ಸಿರಿಧಾನ್ಯಗಳ ಬಳಕೆಯ ಉಪಯುಕ್ತ ಮಾಹಿತಿ ಪಡೆಯಬೇಕಿದೆ ಎಂದರು.
ಜ್ಞಾನವಿಕಾಸ ಸಮನ್ವಯಾಧಿಕಾರಿ ಜಿ.ಎಸ್.ಸುಮಾ ಮಾತನಾಡಿ ಉತ್ತಮ ಆರೋಗ್ಯವಿದ್ದರೆ ನಿರಂತರವಾಗಿ ಕ್ರೀಯಾಶೀಲರಾಗಿರಬಹುದು. ಸಿರಿಧಾನ್ಯಗಳಾದ ಸಾವೆ, ನವಣೆ, ಸಜ್ಜೆ, ಕೊರಲೆ ಹಾರಕ, ಬರಗು, ಊದಲು ಇಂತಹ ಧಾನ್ಯಗಳನ್ನು ಸಂಸ್ಕರಿಸಿ ಸಿರಿ ವತಿಯಿಂದ ಸಿದ್ದ ಆಹಾರ ಉತ್ಪಾದನೆ ಮಾಡಲಾಗುತ್ತದೆ. ಸಂಪತ್ತನ್ನು ಗಳಿಸುವ ಜೊತೆಗೆ ಆರೋಗ್ಯವನ್ನು ಉಳಿಸಿಕೊಳ್ಳುವತ್ತ ಗಮನಹರಿಸಬೇಕಿದೆ ಎಂದು ತಿಳಿಸಿದರು. ಜ್ಞಾನವಿಕಾಸ ಕೇಂದ್ರದ ಸದಸ್ಯೆ ಕವಿತಾ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಒಕ್ಕೂಟ ಅಧ್ಯಕ್ಷೆ ಶೈಲಾ, ವಲಯ ಮೇಲ್ವಿಚಾರಕರಾದ ಗುತ್ಯಪ್ಪ, ಎಂ.ಪೂಜಾ ಇತರರಿದ್ದರು.