ಮಹಲಿಂಗಪುರ

ಸಾರ್ವತ್ರಿಕ ಹಬ್ಬಗಳು ಎಲ್ಲ ಸಮುದಾಯಗಳಿಗೂ ಪವಿತ್ರ ವೈಶಿಷ್ಟ್ಯ: ಇಂಗಳೆ

ಸಾರ್ವತ್ರಿಕ ಹಬ್ಬಗಳು ಎಲ್ಲ ಸಮುದಾಯಗಳಿಗೂ ಪವಿತ್ರ ವೈಶಿಷ್ಟ್ಯ: ಇಂಗಳೆ

ಮಹಾಲಿಂಗಪುರ 15: ಸಾರ್ವತ್ರಿಕ ಹಬ್ಬಗಳು ಎಲ್ಲ ಸಮುದಾಯಗಳಿಗೂ ಪವಿತ್ರ ಹಾಗೂ ವೈಶಿಷ್ಟ್ಯಪೂರ್ಣವಾಗಿದ್ದರೂ, ಕೆಲವು ಸಾರಿ ವರ್ತಮಾನದ ಸ್ಥಿತಿಗತಿಗಳ ಅನುಗುಣವಾಗಿ ಜನತೆಯ ಆರೋಗ್ಯವನ್ನು ಕಾಪಾಡಿ ಮತ್ತು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಲು ಸರಕಾರ ಹೊರಡಿಸುವ ಕಟ್ಟಪ್ಪಣೆಗಳನ್ನು ನಾಗರಿಕರು ಚಾಚೂ ತಪ್ಪದೆ ಪಾಲಿಸಬೇಕಾಗುತ್ತದೆ ಎಂದು ರಬಕವಿ ಬನಹಟ್ಟಿ ತಾಲೂಕಿನ ತಹಶೀಲ್ದಾರ್ ಸಂಜಯ ಇಂಗಳೆ ಹೇಳಿದರು. 

ಬರುವ ಜುಲೈ 21ರಂದು ಆಚರಿಸುವ ಮುಸ್ಲಿಂ ಸಮುದಾಯದ ಬಕ್ರೀದ್ ಹಬ್ಬದ ಸಲುವಾಗಿ ಸ್ಥಳೀಯ ಆರಕ್ಷಕ ಠಾಣೆ ಸಭಾಂಗಣದಲ್ಲಿ ಬುಧವಾರ ಕರೆದ ಸಾರ್ವಜನಿಕ ಶಾಂತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. 

ಸತತ 2ವರ್ಷಗಳಿಂದ ಕೊರೋನಾ ಮಹಾಮಾರಿಯ ಉಪಟಳ ಮತ್ತು ಕೋವಿಡ್ ವೈರಸ್ ನ್ನು ಸಂಪೂರ್ಣ ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಹಿಂದೂ-ಮುಸ್ಲಿಂ ಹಾಗೂ ಇತರೆ ಸಮುದಾಯಗಳ ದೈನಂದಿನ ಹಾಗೂ ಧಾರ್ಮಿಕ ಆಚರಣೆಗಳಿಗೂ ಸರ್ಕಾರ ಕಡಿವಾಣ ಹಾಕಿದೆ. ರಾಜ್ಯದಲ್ಲಿ ಇನ್ನೂ ಕೊರೋನಾ ವೈರಸ್ ಸಂಪೂರ್ಣವಾಗಿ ತೊಲಗಿಲ್ಲ ಕಾರಣ ಸಾಮಾಜಿಕ ಅಂತರ, ಮಾಸ್ಕಧಾರಣೆ, ಸ್ಯಾನಿಟೈಸರ್ ಬಳಕೆಯೊಂದಿಗೆ ಈ ಹಿಂದೆ ಇದ್ದ ನಿಯಮಗಳೇ ಈಗಲೂ ಪ್ರಸ್ತುತ. ಕಾರಣ ಇದ್ಗಾಹ ಜಾಗದಲ್ಲಿ ಯಾವುದೇ ಕಾರಣಕ್ಕೂ ನಮಾಜ್ ಮಾಡುವಂತಿಲ್ಲ. ತಮ್ಮ ತಮ್ಮ ಮನೆಗಳಲ್ಲಿ ಹಾಗೂ ಮಸೀದಿಗಳಲ್ಲಿ ಬೆರಳೆಣಿಕೆಯಷ್ಟು ಜನ ನಮಾಜ ಮಾಡಬಹುದಾಗಿದೆ ಎಂದು ಸಭೆಗೆ ತಿಳಿಸಿ ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿದರು. 

ರಬಕವಿ- ಬನಹಟ್ಟಿ ತಾಲೂಕಿನ ವೃತ್ತ ನೀರೀಕ್ಷಕರಾದ ಕರುಣೇಶಗೌಡ ಅವರು, ಮುಸ್ಲಿಂ ಸಮುದಾಯದ ಗಣ್ಯರಾದ ಸಜನಸಾಬ ಪೆಂಡಾರಿ, ಜಾವೇದ್ ಭಾಗವಾನ್, ನಬಿ ಯಕ್ಸಂಬಿ, ನಜೀರ ಅತ್ತಾರ್, ದಾವಲಸಾಬ್ ನಗಾರ್ಚಿ ಅವರು ಹಬ್ಬ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಹಾಲಿಂಗಪುರ ಭಾವೈಕ್ಯತೆಗೆ ಹೆಸರು ಮಾಡಿದ ಪಟ್ಟಣವಾಗಿದೆ. ಇಲ್ಲಿ ಎಲ್ಲ ಸಮುದಾಯದವರೂ ಕೋವಿಡ್ ನಿಯಮಾನುಸಾರ ಧಾರ್ಮಿಕ ಆಚರಣೆಗಳನ್ನು ಆಚರಿಸಿ ನಮ್ಮ ಇಲಾಖೆಗೂ ಸಹಕರಿಸಿದ್ದಿರಿ ತಮಗೆ ಧನ್ಯವಾದವೆಂದು ತಿಳಿಸಿ, ಹಾಗೇನಾದರೂ ಕೊನೆಗಳಿಗೆಯಲ್ಲಿ ಸರ್ಕಾರ ಬಕ್ರೀದ್ ಹಬ್ಬದ ಧಾರ್ಮಿಕ ಆಚರಣೆಗೆ ನಿಯಮಗಳನ್ನು ಸಡಿಲಿಸಿ ಸುತ್ತೋಲೆ ಹೊರಡಿಸಿದ್ದೇ ಆದರೆ ತಮಗೆ ತಿಳಿಸಲಾಗುವುದು ಮತ್ತು ಹಳ್ಳಿ ಪಟ್ಟಣಗಳಿಗೂ ಒಂದೇ ರೀತಿಯ ಕಾನೂನು ಎಂದರು. 

ಮಾಜಿ ಪುರಸಭಾಧ್ಯಕ್ಷ ಶೇಖರ್ ಅಂಗಡಿ ಮಾತನಾಡಿ, ನಗರದ ಹಿಂದೂ-ಮುಸ್ಲಿಂ ಬಾಂಧವರಲ್ಲಿ ಅನೋನ್ಯತೆ ಇದ್ದು ಬಕ್ರೀದ್ ಹಬ್ಬದ ಸರಳ ಆಚರಣೆಗೆ ನಮ್ಮೆಲ್ಲರ ಬೆಂಬಲವಿದೆ ಎಂದರು. ನಗರ ಠಾಣೆಯ ನೂತನ ಪಿಎ??? ವಿನೋದ್ ಕಾಂಬ್ಳೇ ಪ್ರಾಸ್ತಾವಿಕ ಮಾತುಗಳನ್ನಾಡಿ, ಸಿಬ್ಬಂದಿ ಎ.ಎಸ್‌.ಮದರಖಂಡಿ ನಿರೂಪಿಸಿ, ವಂದಿಸಿದರು. 

ಈ ಸಂದರ್ಭದಲ್ಲಿ ಪಿ.ಎಸ್‌.ಐ ಎಸ್‌.ಎಸ್ ಘಾಟಗೆ, ಸರ್ಕಲ್ ಬಸವರಾಜ ತಾಳಿಕೋಟಿ, ಮಲ್ಲಪ್ಪ ಭಾವಿಕಟ್ಟಿ, ಸಲೀಂ ಕರೋಶಿ, ಜಮೀರ್ ಯಕ್ಸಂಬಿ, ಭೀಮಶಿ ಗೌಂಡಿ, ಉಸ್ಮಾನ್ ಪೆಂಡಾರಿ, ನಾಗೇಶ ಬಜಂತ್ರಿ, ಪರಶುರಾಮ ಮೇತ್ರಿ, ರಮೇಶ ಮಾಂಗ, ಮೆಹಬೂಬ ಜೀರಗಾಳ, ಎಸ್‌.ಕೆ ಪಾಂಡು, ವಿಠ್ಠಲ ಕುಳಲಿ, ಹಾಸೀಮ ಪೆಂಡಾರಿ, ಬಸವರಾಜ ಮಾವಿನಹಿಂಡಿ, ಜೆ.ಜೆ ಪಾಟೀಲ, ಬಿ.ವಾಯ ಮರ್ದಿ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ