ಕೇಂದ್ರ ಬಜೆಟ್ :ವಿದ್ಯಾರ್ಥಿಗಳಿಗೆ ನಿಬಂಧನೆ ಆಧಾರಿತ ಸಾಲ ಆಘಾತಕಾರಿ: ಎಐಡಿಎಸ್ಓ
ಬಳ್ಳಾರಿ 23: ಕೇಂದ್ರ ಬಜೆಟ್ ಕುರಿತು ವಿದ್ಯಾರ್ಥಿಗಳನ್ನು ಸಾಲದ ಸುಳಿಗೆ ದೂಡುವ 2024-25ರ ಕೇಂದ್ರ ಬಜೆಟ್ನಲ್ಲಿ 1,48,000 ಕೋಟಿಯನ್ನು ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ದಿಗೆ ಮೀಸಲಿಡಲಾಗಿದೆ. ವಿವಿಧ ಕ್ಷೇತ್ರಗಳನ್ನು ಒಂದೇ ತೆಕ್ಕೆಯಲ್ಲಿ ಸೇರಿಸಿ ಶಿಕ್ಷಣಕ್ಕೆ ಹೆಚ್ಚಿನ ಮೊತ್ತ ನೀಡಿರುವುದಾಗಿ ಕೇಂದ್ರ ಸರ್ಕಾರವು ತೋರಿ್ಡಸಿಕೊಳ್ಳುತ್ತಿದೆ. ತಾವೇ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಶಿಫಾರಸ್ಸಿನಂತೆ ಶೇಕಡ 6ಅನ್ನೂ ಕೂಡ ಶಿಕ್ಷಣಕ್ಕೆ ನೀಡದೆ, ಶೇಕಡ 4ಅಕ್ಕಿಂತ ಕಡಿಮೆ ಅನುದಾನ ನೀಡಿರುವುದು ಖಂಡನೀಯ. ಸ್ಥಳೀಯ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ನಿಬಂಧನೆ ಆಧಾರಿತ ಸಾಲಗಳನ್ನು ನೀಡುವ ಘೋಷಣೆಯು ಆಘಾತಕಾರಿಯಾಗಿದೆ.
ಸಾಲದ ಸುಳಿಯಲ್ಲಿ ಸಿಲುಕಿ ನರಳುವಂತೆ ಸರ್ಕಾರವೇ ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತಿದೆ. ಸಾಮಾನ್ಯ ಜನರ ಮೇಲಿನ ಶೈಕ್ಷಣಿಕ ವೆಚ್ಚದ ಹೊರೆಯನ್ನು ಇಳಿಸಲು ಶುಲ್ಕವನ್ನು ಕಡಿಮೆ ಮಾಡುವ ಮತ್ತು ಸಾರ್ವಜನಿಕ ಅನುದಾನಿತ ಸಂಸ್ಥೆಗಳನ್ನು ಹೆಚ್ಚಿಸುವ ಬದಲು, ಶಿಕ್ಷಣದ ಮೇಲಿನ ಹೆಚ್ಚು ಶುಲ್ಕವನ್ನು ಭರಿಸಲು ಸರ್ಕಾರವು ವಿದ್ಯಾರ್ಥಿಗಳೇ ಸಾಲ ತೆಗೆದುಕೊಳ್ಳಬೇಕೆಂದು ಹೇಳುತ್ತಿದೆ. ಈ ವಿಧಾನವು ಅತ್ಯಂತ ಖಂಡನೀಯವಾಗಿದ್ದು, ಈ ಮೂಲಕ ಸರ್ಕಾರವು ಪ್ರತಿಯೊಬ್ಬರಿಗೂ ಶಿಕ್ಷಣವನ್ನು ಒದಗಿಸುವ ತನ್ನ ಜವಾಬ್ದಾರಿಯಿಂದ ದೂರ ಸರಿಯುತ್ತಿದೆ.! ತಮ್ಮ ಕೌಶಲ್ಯವನ್ನು ಸಾಬೀತುಪಡಿಸಲು 20 ಲಕ್ಷ ವಿದ್ಯಾರ್ಥಿಗಳನ್ನು ಕೇಂದ್ರ ಬಜೆಟ್ ಗುರುತಿಸಿದೆ. ಸಹಜವಾಗಿ ಕೌಶಲ್ಯಗಳು ಅವಶ್ಯಕ, ಆದರೆ ಉದ್ಯೋಗ ಸೃಷ್ಟಿ ಇಲ್ಲದೆ, ಕೌಶಲ್ಯಗಳಿಗೆ ಯಾವುದೇ ಪ್ರಯೋಜನವಿಲ್ಲ.
ಸರ್ಕಾರವು ಉದ್ಯೋಗಗಳನ್ನು ಹೇಗೆ ಸೃಷ್ಟಿಸುತ್ತದೆ ಎಂಬುದರ ಕುರಿತು ಬಜೆಟ್ನಲ್ಲಿ ಸ್ಪಷ್ಟ ಮಾರ್ಗಸೂಚಿಯ ಉಲ್ಲೇಖವೇ ಇಲ್ಲ. ಬದಲಿಗೆ ಕೇಂದ್ರ ಸರ್ಕಾರವು ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ನೀಡುವುದಾಗಿ ಘೋಷಿಸಿದೆ! ಇದು ಸರ್ಕಾರದ ಉದ್ಯಮ ಸ್ನೇಹಿತರಿಗೆ ಅಗ್ಗದ ಕಾರ್ಮಿಕರನ್ನು ಒದಗಿಸುವುದಕ್ಕಲ್ಲದೇ ಬೇರೇನೂ ಅಲ್ಲ. ತಿಂಗಳಿಗೆ 5000 ಕ್ಕಿಂತ ಕಡಿಮೆ ಸ್ಟೈಫಂಡ್ ನೀಡುವುದರೊಂದಿಗೆ ಇಂಟರ್ನ್ಶಿಪ್ ವಿದ್ಯಾರ್ಥಿ ಸಮುದಾಯವನ್ನು ತೀವ್ರವಾದ ಆರ್ಥಿಕ ಅಸ್ಥಿರತೆಗೆ ತಳ್ಳುತ್ತದೆ. ಮತ್ತು ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ನಿರಂತರವಾಗಿ ಎದುರಿಸುತ್ತಿರುವ ವಿಫಲತೆಯನ್ನು ಮರೆಮಾಡಲು ಈ ಯೋಜನೆ ತರಲಾಗಿದೆಯೇ ಹೊರತು ಉದ್ಯೋಗ ಸೃಷ್ಟಿಸುವ ನೈಜ ಕಾಳಜಿಯೇ ಇಲ್ಲಿ ಕಾಣುತ್ತಿಲ್ಲ.ಸ್ಟೈಫಂಡ್ ಅನ್ನು ನೀಡಲು ಸರ್ಕಾರವು ಯಾವುದೇ ಹಣವನ್ನು ನಿಗದಿಪಡಿಸದ ಕಾರಣ ಆ ಮೊತ್ತವನ್ನು ಕಂಪನಿಗಳಿಂದಲೇ ನೀಡಲಾಗುತ್ತದೆ. ಆದ್ದರಿಂದ ಸ್ಟೈಫಂಡ್ ಮೊತ್ತ ದೊರಕುವುದರಲ್ಲಿ ಕೂಡ ಯಾವುದೇ ಭರವಸೆ ಇಲ್ಲ.ಕೋಚಿಂಗ್ ಮಾಫಿಯಾ ದೇಶಾದ್ಯಂತ ವಿದ್ಯಾರ್ಥಿ ಸಮೂಹವನ್ನು ಹೇಗೆ ಶೋಷಣೆ ಮಾಡುತ್ತಿದೆ ಎಂಬುದನ್ನು ನಾವು ಗಮನಿಸುತ್ತಿದ್ದೇವೆ. ಶಿಕ್ಷಣದ ಸಾರವನ್ನು ಸಂಪೂರ್ಣವಾಗಿ ನಾಶಪಡಿಸುತ್ತಿರುವ ಈ ರಾಕ್ಷಸೀ ಕೃತ್ಯವನ್ನು ನಿಗ್ರಹಿಸಲು ಕೇಂದ್ರ ಬಜೆಟ್ನಲ್ಲಿ ಯಾವುದೇ ಕ್ರಮವನ್ನು ಘೋಷಿಸಲಾಗಿಲ್ಲ. ಉದ್ಯೋಗಗಳನ್ನು ಸೃಷ್ಟಿಸದೆಯೇ ಸಾಲ, ಅಗ್ಗದ ಶ್ರಮ ಮತ್ತು ಕೇವಲ ಕೌಶಲ್ಯದ ಮೇಲೆ ಕೇಂದ್ರೀಕರಿಸಿದ ಕೇಂದ್ರ ಬಜೆಟ್ ಈಗಾಗಲೇ ಆಳವಾದ ಬಿಕ್ಕಟ್ಟಿನ ಮಧ್ಯೆ ಶಿಕ್ಷಣದ ಮೇಲಿನ ವೆಚ್ಚದ ಹೊರೆಯಿಂದ ಬಳಲುತ್ತಿರುವ ವಿದ್ಯಾರ್ಥಿ ಸಮೂಹಕ್ಕೆ ಗಾಯದ ಮೇಲೆ ಬರೆ ಎಳದಂತೆಯೇ ಆಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಶಿಕ್ಷಣಕ್ಕಾಗಿ ಮೀಸಲಿಟ್ಟಿರುವ ಹಣವನ್ನು ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು ಮತ್ತು ಎಲ್ಲರಿಗೂ ಶಿಕ್ಷಣವು ದೊರಕುವಂತೆ ಖಾತ್ರಿಪಡಿಸಲು ವಿನಿಯೋಗಿಸಬೇಕೆಂದು ಎಐಡಿಎಸ್ಓ ಬಳ್ಳಾರಿ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ.