ಗ್ರಾಮೀಣ ಭಾಗಗಳಲ್ಲಿ ಉದ್ದಿಮೆ ಸ್ಥಾಪಿಸುವುದುರೊಂದಿಗೆ ನಿರುದ್ಯೋಗ ಕಡಿಮೆಯಾಗುತ್ತದೆ: ಡಾ.ಅಭಿನವ ಚನ್ನಬಸವ ಶ್ರೀ
ಮಹಾಲಿಂಗಪುರ: ಗ್ರಾಮೀಣ ಭಾಗಗಳಲ್ಲಿ ಉದ್ದಿಮೆ ಸ್ಥಾಪಿಸುವುದುರೊಂದಿಗೆ ನಿರುದ್ಯೋಗ ಕಡಿಮೆಯಾಗುತ್ತದೆ ಮತ್ತು ದೇಶದ ಆರ್ಥಿಕ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂದು ಜಮಖಂಡಿ ಓಲೆಮಠದ ಡಾ.ಅಭಿನವ ಚನ್ನಬಸವ ಮಹಾಸ್ವಾಮಿಗಳು ಹೇಳಿದರು.
ಸಮೀಪದ ಚಿಮ್ಮಡ ಗ್ರಾಮದ ಮಡ್ಡಿ ಪ್ರಭುಲಿಂಗೇಶ್ವರ ದೇವಸ್ಥಾನದ ಹತ್ತಿರ ಸುಯೋಗಪೂಜಾರಿ ಸಂಸ್ಥೆಯಿಂದ ನಿರ್ಮಿಸಲಾದ ನೂತನ ಕೈಗಾರಿಕಾ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕೈಗಾರಿಕೆಗಳೆಂದರೆ ನಗರ ಪ್ರದೇಶಗಳಿಗೆ ಮಾತ್ರ ಸಿಮಿತವಾಗಿರುವ ಇಂತಹ ಸ್ಥಿತಿಯಲ್ಲಿ ಗ್ರಾಮೀಣ ಭಾಗದಲ್ಲಿ ಉದ್ದಿಮೆ ಸ್ಥಾಪಿಸುವುದು ಸಾಹಸದ ಕೆಲಸ, ಅಂತಹ ಸಾಹಸಕ್ಕೆ ಚಿಮ್ಮಡ ಗ್ರಾಮದ ಸುಯೋಗಪೂಜಾರಿ ಸಂಸ್ಥೆ ಕೈ ಹಾಕಿರುವುದು ಶ್ಲಾಘನೀಯ ಕಾರ್ಯವಾಗಿದ್ದು ಛಲ, ನಿಷ್ಠೆಯೊಂದಿದ್ದರೆ ಪ್ರತಿಯೊಂದು ಕಾರ್ಯ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲವೆಂದರು.
ಕಾರ್ೋರೇಟ್ ಟ್ರೇನರ್ ಮಹೇಶ ಮಾಶಾಳ ಮಾತನಾಡಿ ಉದ್ಯಮಿಗಳು ತಮ್ಮ ಲಾಭವನ್ನು ಮಾತ್ರ ಪರಿಗಣಿಸದೆ ಸೇವಾ ಮನೋಭಾವ ಹೊಂದಿರಬೇಕು, ಈ ಭಾಗದ ಜನರ ಜೀವನಾಡಿಯಂತೆ ಕಾರ್ಯ ನಿರ್ವಹಿಸಿದಲ್ಲಿ ಉದ್ಯಮ ಗುರಿ ತಲುಪಿದಂತೆಯೇ ಸರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಂದಿಗುಂದ ಆಡಿ ಸಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು ವಹಿಸಿದ್ದರು. ಕೊಣ್ಣೂರ ಹೊರಗಿನ ಮಠದ ಶ್ರೀ ಡಾ. ವಿಶ್ವಪ್ರಭು ಶಿವಾಚಾರ್ಯ ಮಹಾಸ್ವಾಮಿಗಳು, ಸ್ಥಳೀಯ ವಿತಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು, ರಘುನಾಥ ಪ್ರಿಯ ಸಾಧು ಮಹಾರಾಜರ ಮಠದ ಜನಾರ್ಧನ ಮಹಾರಾಜರು ಸಾನಿಧ್ಯವಹಿಸಿದ್ದರು.
ಜಿಪಂ ಸದಸ್ಯ ಪರಶುರಾಮ ಬಸವ್ವಗೋಳ, ಮಹಾಲಿಂಗಪುರ ಪುರಸಭೆ ಅಧ್ಯಕ್ಷೆ ಸ್ನೇಹಲ್ ಅಂಗಡಿ, ಗ್ರಾಪಂ ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ, ಸಂಸ್ಥೆಯ ಪುಂಡಲಿಕಪ್ಪ ಪೂಜಾರಿ, ಶಿವಲಿಂಗಪ್ಪ ಪಾಟೀಲ, ರಾಮಣ್ಣ ಮುಗಳಖೋಡ ಬಾಳಪ್ಪ ಹಳಿಂಗಳಿ, ಪ್ರಭು ಮುಧೋಳ ಸೇರಿದಂತೆ ಹಲವಾರು ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.