ಮಹಲಿಂಗಪುರ

ಅರ್ಹ ಬಡ ಫಲಾನುಭವಿಗಳಿಗೆ ಮನೆಗಳನ್ನು ನೀಡಿ: ಶಾಸಕ ಸವದಿ

ಅರ್ಹ ಬಡ ಫಲಾನುಭವಿಗಳಿಗೆ ಮನೆಗಳನ್ನು ನೀಡಿ: ಶಾಸಕ ಸವದಿ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಆಯ್ದ ಪಲಾನುಭವಿಗಳಿಗೆ ಪುರಸಭೆಯಲ್ಲಿ ಯುಪಿಎಸ್ ಮತ್ತು ಲ್ಯಾಪ್ಟಾಪ್ ವಿತರಣೆ ಕಾರ್ಯಕ್ರಮ. 

ಮಹಾಲಿಂಗಪುರ : ಬಹುದಿನಗಳಿಂದ ಚಾತಕ ಪಕ್ಷಿಗಳಂತೆ ಮನೆಗಳಿಗೆ ಅರ್ಜಿ ಹಾಕಿ ಕಾಯುತ್ತಿರುವ ಅರ್ಹ ಬಡ ಫಲಾನುಭವಿಗಳಿಗೆ (ನಿರ್ವಸ್ತಿಕರಿಗೆ) ಪಕ್ಷಾತೀತವಾಗಿ ಮನೆಗಳನ್ನು ನೀಡಿ ಎಂದು ತೇರದಾಳ ಶಾಸಕ ಸಿದ್ದು ಸವದಿ ಪುರಸಭೆ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ತಿಳಿಸಿದರು. 

ಪುರಸಭೆಯಲ್ಲಿ 2020-21 ನೇ ಸಾಲಿನ ಎಸ್‌.ಎಫ್‌.ಸಿ ಮುಕ್ತ ನಿಧಿಯಲ್ಲಿಯ ಪ್ರತಿಶತ 24.10 ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಆಯ್ದ ಪಲಾನುಭವಿಗಳಿಗೆ ಯುಪಿಎಸ್ ಮತ್ತು ಲ್ಯಾಪ್ಟಾಪ್ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಆಸರೆ ಯೋಜನೆಯಲ್ಲಿ 180 ಮನೆಗಳಿಗೆ ಮನವಿ ಮಾಡಲಾಗಿದ್ದು ಇದಕ್ಕೆ ಸಕಾರಾತ್ಮಕವಾಗಿ ಅವರು ಸ್ಪಂದಿಸಿದ್ದಾರೆ. ಆದ್ದರಿಂದ ನಾಲ್ಕಾರು ದಿವಸಗಳಲ್ಲಿ ಪಟ್ಟಣದ ಪ್ರತಿ ವಾರ್ಡಿನಲ್ಲಿ ನಮ್ಮ ಸದಸ್ಯರು ಹಾಗೂ ಮುಖಂಡರು ಫಲಾನುಭವಿಗಳ ಯಾದಿಯನ್ನು ತಯಾರಿಸಿ ಮತ್ತು ಈಗಾಗಲೇ ಬಹಳ ದಿನಗಳಿಂದ ಅರ್ಜಿ ಹಾಕಿರುವವರಲ್ಲಿ ಯೋಜನೆಗೆ ಅರ್ಹರಾಗಿದ್ದರೆ ಅಂತವರನ್ನು ಪರಿಗಣಿಸಿರಿ ಎಂದರು. 

ಪಟ್ಟಣದ 10ಸ್ಲಂ ವಾರ್ಡ್‌ ಗಳ ನಿವಾಸಿಗಳಿಗೆ 500 ಮನೆಗಳು ಮಂಜೂರಾಗಿ, ಟೆಂಡರ್ ಸಹ ಆಗಿವೆ. ಕೆಂಗೇರಿಮಡ್ಡಿಯಲ್ಲಿ ಪುರಸಭೆ ಆಸ್ತಿಯ 6 ಎಕರೆ ಜಮೀನಿನಲ್ಲಿ ಜಿ+1, ಜಿ+2 ನಮೂನೆಯ ಮನೆಗಳನ್ನು ಕಟ್ಟಲಾಗುವುದು. ನಿರ್ವಸ್ತಿಕರಿಗೆ ಮಾತ್ರ ಈ ಮನೆಗಳನ್ನು ನೀಡಬೇಕೆಂದೂ ಮತ್ತು ಆದಷ್ಟು ಬೇಗ ಪುರಸಭೆ ಸ್ಲಂ ಬೋರ್ಡಿಗೆ ಜಮೀನು ಹಸ್ತಾಂತರಿಸಬೇಕು, ಇಲ್ಲವೆಂದರೆ ಅನುದಾನದ ಹಣ ವಾಪಸ್ ಹೋಗುತ್ತದೆ ಬೇಗ ಕೆಲಸ ಆರಂಭಿಸಿ ಎಂದು ಚುನಾಯಿತ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತಿಳಿಸಿದರು.  

ಮಂಜುಳಾ ಬುರುಡ, ಸರೋಜಿನಿ ಈರಗಾರ, ಮಹಾಲಿಂಗಪ್ಪ ಮೇದಾರ ಇವರಿಗೆ ಯುಪಿಎಸ್ ಮತ್ತು ಸ್ಥಳೀಯ ನಿಧಿಯಲ್ಲಿ ಕು.ಯಲ್ಲವ್ವ ಬುರುಡ ಅವರಿಗೆ ಲ್ಯಾಪ್ ಟಾಪ್ ನೀಡಲಾಯಿತು. 

ವೇದಿಕೆಯ ಮೇಲೆ ಪುರಸಭಾಧ್ಯಕ್ಷೆ ಸ್ನೇಹ ಅಂಗಡಿ, ಧುರೀಣರಾದ ಬಸನಗೌಡ ಪಾಟೀಲ್, ಈರ​‍್ಪ ದಿನ್ನಿಮನಿ ಹಾಗೂ ಪುರಸಭೆ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವ್ಯವಸ್ಥಾಪಕ ಎಸ್‌. ಎನ್‌. ಪಾಟೀಲ್ ನಿರೂಪಿಸಿ, ವಂದಿಸಿದರು. 

ಮುಖ್ಯಾಂಶಗಳು: 

* ಸಾಮಾನ್ಯ ಫಲಾನುಭವಿಗಳಿಗೆ 6.89ಸಾವಿರ ಮೊತ್ತದ ಮನೆಗೆ ಪ್ರತಿಶತ15 ರಷ್ಟು ಸ್ವಂತ ಬಂಡವಾಳ ಮತ್ತು ಸ್ಥಳೀಯ ರಾಷ್ಟ್ರೀಕೃತ ಬ್ಯಾಂಕಿನಿಂದ 3.15 ಸಾವಿರ ದೀರ್ಘ ಸಾಲ ದೊರೆಯುತ್ತದೆ. 

* ಪ.ಜಾತಿ, ಪ.ಪಂಗಡದವರು ಪ್ರತಿಶತ 10ರಷ್ಟು ಸ್ವಂತ ಬಂಡವಾಳ ಸ್ಥಳೀಯ ಬ್ಯಾಂಕಿನಲ್ಲಿ 2.70 ಸಾಲ ಹಣ ದೊರೆಯುತ್ತದೆ. ಲೇಬರ್ ಕಾರ್ಡ್‌ ದಾರರಿಗೂ ಸೌಲಭ್ಯವಿದೆ. 

ಕೊನೆಯ ಸುತ್ತಿನ ಮಾತುಕತೆ ನಂತರ ಪಟ್ಟಣದ ಕೆಂಗೇರಿಮಡ್ಡಿ ಬಡಾವಣೆಯ 1ಸಾವಿರ ಹಾಗೂ ಕಲ್ಪಡದ 357 ಅಕ್ರಮ ಮನೆಗಳಿಗೆ ಸಕ್ರಮ ಭಾಗ್ಯದಲ್ಲಿ ಹಕ್ಕು ಪತ್ರಗಳು ದೊರೆಯಲಿವೆ.  

-ಸಿದ್ದು ಸವದಿ. ಶಾಸಕ ತೇರದಾಳ ಮತಕ್ಷೇತ್ರ. 


ಸುದ್ದಿ ಓದಿ