ರಾಷ್ಟ್ರೀಯ

ಮಹಾರಾಷ್ಟ್ರ: ಚಂದ್ರಾಪುರದಲ್ಲಿ ಹುಲಿ ದಾಳಿಗೆ ಇಬ್ಬರು ಬಲಿ, ಜಾನುವಾರು ಮೇಯಿಸುತ್ತಿದ್ದ ವ್ಯಕ್ತಿಗೆ ಗಂಭೀರ ಗಾಯ

ಮಹಾರಾಷ್ಟ್ರ: ಚಂದ್ರಾಪುರದಲ್ಲಿ ಹುಲಿ ದಾಳಿಗೆ ಇಬ್ಬರು ಬಲಿ, ಜಾನುವಾರು ಮೇಯಿಸುತ್ತಿದ್ದ ವ್ಯಕ್ತಿಗೆ ಗಂಭೀರ ಗಾಯ

ಚಂದ್ರಾಪುರ, ಅ. 31 : ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ನಡೆದ ಮೂರು ಹುಲಿ ದಾಳಿಗಳಲ್ಲಿ ಇಬ್ಬರು ಮೃತಪಟ್ಟಿದ್ದು, ಜಾನುವಾರು ಮೇಯಿಸುತ್ತಿದ್ದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅರಣ್ಯ ಪ್ರದೇಶಗಳ ಸಮೀಪವಿರುವ ಗ್ರಾಮಗಳ ನಿವಾಸಿಗಳಲ್ಲಿ ಈ ಘಟನೆಗಳು ಆತಂಕ ಮೂಡಿಸಿವೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಅರಣ್ಯ ಅಧಿಕಾರಿಗಳ ಪ್ರಕಾರ, ಶುಕ್ರವಾರ ಜಿಲ್ಲೆಯಲ್ಲಿ ಹುಲಿ ದಾಳಿಯ ಮೂರು ಘಟನೆಗಳು ವರದಿಯಾಗಿವೆ.

ಮೊದಲ ಘಟನೆಯಲ್ಲಿ, ಚಿಮೂರ್‌ನ ಗಡಗಾಂವ್ ಅರಣ್ಯ ವ್ಯಾಪ್ತಿಯ ಕೃಷಿ ಜಮೀನಿನ ಸಮೀಪ ಶುಕ್ರವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ ಶೌಚಕ್ಕೆ ತೆರಳಿದ್ದ ಗಾರ್ಡಾಪಾರ್ ಗ್ರಾಮದ ನಿವಾಸಿ ಸದಾಶಿವ್ ಚಿರ್ಕಟಾ ಖಡ್ಸಂಗ್ (55) ಅವರ ಮೇಲೆ ಹುಲಿ ದಾಳಿ ನಡೆಸಿದೆ. ದಾಳಿಯಲ್ಲಿ ಅವರು ಮೃತಪಟ್ಟಿದ್ದಾರೆ.

ಮತ್ತೊಂದು ಘಟನೆಯಲ್ಲಿ, ಸಿಂದೇವಾಹಿ ತಾಲ್ಲೂಕಿನ ಧುಮಾನ್ಖೇಡಾ ಗ್ರಾಮದ 75 ವರ್ಷದ ಪಟ್ರು ರಾಮಾಜಿ ಮೆಶ್ರಾಮ್ ಅವರು ಶುಕ್ರವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ತಮ್ಮ ಭತ್ತದ ಬೆಳೆಯನ್ನು ಪರಿಶೀಲಿಸಲು ಜಮೀನಿಗೆ ತೆರಳಿದ್ದರು. ಆದರೆ, ಅವರು ಮನೆಗೆ ಹಿಂದಿರುಗಿರಲಿಲ್ಲ.

ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಹುಡುಕಾಟ ನಡೆಸಿದಾಗ ಜಮೀನಿನಲ್ಲಿ ಅವರ ಕನ್ನಡಕ, ಊರುಗೋಲು, ಚಪ್ಪಲಿಗಳು ಮತ್ತು ರಕ್ತದ ಕಲೆಗಳು ಪತ್ತೆಯಾಗಿವೆ. ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪ ಅವರ ಮೃತದೇಹ ಪತ್ತೆಯಾಗಿದೆ. ಹುಲಿಯು ಅವರನ್ನು ಎಳೆದೊಯ್ದು ಕೊಂದಿರುವ ಶಂಕೆ ವ್ಯಕ್ತವಾಗಿದೆ.

ಇನ್ನು ಮೂರನೇ ಘಟನೆಯಲ್ಲಿ, ಪೊಂಭುರ್ನಾ ತಾಲ್ಲೂಕಿನ ಸತಾರಾ ಟುಕೂಮ್ ಪ್ರದೇಶದಲ್ಲಿ ಜಾನುವಾರು ಮೇಯಿಸುತ್ತಿದ್ದ 60 ವರ್ಷದ ರಾಜೇಶ್ವರ್ ಬಿಜಾ ಸಿಡಾಮ್ ಎಂಬುವವರ ಮೇಲೆ ಹುಲಿ ದಾಳಿ ನಡೆಸಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅವರು ಜಾನುವಾರುಗಳನ್ನು ಮೇಯಿಸಲು ಅರಣ್ಯ ಪ್ರದೇಶಕ್ಕೆ ತೆರಳಿದ್ದಾಗ, ಅರಣ್ಯ ವಿಭಾಗದ 436ನೇ ಕಂಪಾರ್ಟ್‌ಮೆಂಟ್‌ನಲ್ಲಿ ಅಡಗಿದ್ದ ಹುಲಿ ಏಕಾಏಕಿ ದಾಳಿ ನಡೆಸಿದೆ.

ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಗೊಂಡ್ವಾನಾ ಆದಿವಾಸಿ ಚಳವಳಿಯ ಸದಸ್ಯರು ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ಚಂದ್ರಾಪುರದ ಜಿಲ್ಲಾ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸತತ ಹುಲಿ ದಾಳಿಗಳಿಂದ ಅರಣ್ಯ ಪ್ರದೇಶಗಳ ಪಕ್ಕದಲ್ಲಿರುವ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನರಭಕ್ಷಕ ಹುಲಿಗಳನ್ನು ಸೆರೆಹಿಡಿದು ಅರಣ್ಯ ಪ್ರದೇಶಗಳ ಸಮೀಪ ವಾಸಿಸುವ ಜನರ ಸುರಕ್ಷತೆ ಖಚಿತಪಡಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸುದ್ದಿ ಓದಿ