ತ್ರಿಕೋನ ಪ್ರೀತಿ : ಸಿನಿಮೀಯ ರೀತಿ ತಲ್ವಾರ್ ಹಿಡಿದು ಮನೆಗೆಗಳಿಗೆ ನುಗ್ಗಿದ ಪುಂಡರು : ಮನೆ, ವಾಹನಗಳ ಮೇಲೆ ಕಲ್ಲು ತೂರಾಟ
ಬೆಳಗಾವಿ : ಮೂವರ ನಡುವಿನ ತ್ರಿಕೋನ ಪ್ರೀತಿ ವಿಚಾರಕ್ಕೆ ಸಂಬಂಧಿಸಿದಂತೆ ಸುಮಾರು 25 ಜನ ಮುಸುಕುಧಾರಿ ಪುಂಡರ ತಂಡವೊಂದು ಸಿನಿಮೀಯ ರೀತಿ ತಡರಾತ್ರಿ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ನಾಲ್ಕು ಮನೆಗಳಿಗೆ ನುಗ್ಗಿ ದಾಂಧಲೆ ಮಾಡಿ ಮನೆಗಳ ಮೇಲೆ ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿ ಅಟ್ಟಹಾಸ ಮೆರೆದಿರುವ ಘಟನೆ ತಾಲ್ಲೂಕಿನ ನಾವಗೆ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ಬೆಳಗಾವಿ ತಾಲೂಕಿನ ಹೊಸವಂಟಮುರಿ ಗ್ರಾಮದಲ್ಲಿ ನಡೆದಿದ್ದ ಒಂದೇ ಸಮುದಾಯಕ್ಕೆ ಸೇರಿದ ಯುವಕ-ಯುವತಿ ಮನೆ ಬಿಟ್ಟು ಪಲಾಯನ ಮಾಡಿರುವ ಕಾರಣಕ್ಕೆ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿದ ಘಟನೆ ಮಾಸುವ ಮುನ್ನವೇ ಇದೀಗ ನಾವಗೆ ಗ್ರಾಮದಲ್ಲಿ ಪ್ರೀತಿ-ಪ್ರೇಮ ಕಾರಣಕ್ಕೆ ಕಿಡಿಗೇಡಿಗಳು ನಾಲ್ಕು ಮನೆಗಳಿಗೆ ನುಗ್ಗಿ ಅಟ್ಟಹಾಸ ಮೆರೆದಿದ್ದಾರೆ.
ಸುಮಾರು 25ರಿಂದ 30 ಜನರಿದ್ದ ಪುಂಡರ ಗುಂಪು ಗ್ರಾಮಕ್ಕೆ ನುಗ್ಗಿ ಬಂದೂಕು, ದೊಣ್ಣೆ ಹಿಡಿದು ದಾಳಿ ನಡೆಸಿದೆ. ಎರಡು ಕಾರು, 4 ಬೈಕ್ ಗಳನ್ನು ಜಖಂ ಮಾಡಲಾಗಿದೆ. ನಾಲ್ಕು ಮನೆಗಳ ಮೇಲೆ ದಾಳಿಯಾಗಿದೆ.
ಸೋಮವಾರ ಗ್ರಾಮಕ್ಕೆ ತಡರಾತ್ರಿ ನುಗ್ಗಿದ ಕಿಡಿಗೇಡಿಗಳು ಸುಮಾರು 30ಕ್ಕೂ ಹೆಚ್ಚು ಜನ ಇದ್ದರು ಎನ್ನಲಾಗಿದೆ. ಎಲ್ಲರೂ ಮುಸುಕುಧಾರಿಗಳಾಗಿ ಗ್ರಾಮ ಪ್ರವೇಶಿಸಿ ಅಟ್ಟಹಾಸ ಮೆರೆದಿದ್ದಾರೆ. ಇವರ ಪುಂಡಾಟ ನೋಡಿ ಗ್ರಾಮಸ್ಥರು ಬೆಚ್ಚಿ ಬೀಳುವಂತಾಗಿದೆ. ಮನೆಗಳ ಕಿಟಕಿ, ಗೋಡೆ ಹಾಗೂ ಟೈಲ್ಸ್ ಗಳನ್ನು ಸಹಾ ಧ್ವಂಸಗೊಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಯಾವ ಕಾರಣಕ್ಕೆ ಗಲಾಟೆ ನಡೆದಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುತ್ತದೆ. ಘಟನೆಗೆ ಕಾರಣರಾದ ಎಲ್ಲರನ್ನು ಶೀಘ್ರವೇ ಬಂಧಿಸುವುದಾಗಿ ಹೇಳಿದ್ದಾರೆ. ಸದ್ಯ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಆದರೆ ಗ್ರಾಮದಲ್ಲಿ ಬೂದಿ ಮುಚ್ವಿದ ಕೆಂಡದಂತೆ ತ್ವೇಶದ ವಾತಾವರಣ ನಿರ್ಮಾಣವಾಗಿದೆ.