ಹಗರಿಬೊಮ್ಮನಹಳ್ಳಿ

ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಬಂಡಾಯ ಪ್ರಜ್ಞೆ ಕಣ್ಮರೆೆ: ಸ್ವಾಮೀಜಿ

ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಬಂಡಾಯ ಪ್ರಜ್ಞೆ ಕಣ್ಮರೆೆ: ಸ್ವಾಮೀಜಿ


ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 10: ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಬಂಡಾಯ ಪ್ರಜ್ಞೆ ಕಣ್ಮರೆಯಾಗುತ್ತಿದೆ, ಪ್ರಾಮಾಣಿಕ ಹೋರಾಟಗಾರರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಸಾಣೆಹಳ್ಳಿ ಶ್ರೀತರಳಬಾಳು ಜಗದ್ಗುರು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.  

ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಸಹಮತ ವೇದಿಕೆ, ಕುವೆಂಪು ಗ್ರಂಥಾಲಯ ಬಳಗ ಸಹಯೋಗದಲ್ಲಿ ಏರಿ​‍್ಡಸಿದ್ದ ರೈತ ಹೋರಾಟಗಾರ ಜೆ.ಎಂ.ವೀರಸಂಗಯ್ಯನವರ ಕುರಿತಾದ 'ರೈತ ನೇತಾರ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ದಿವ್ಯಸಾನ್ನಿಧ್ಯವಹಿಸಿ ಮಾತನಾಡಿದರು. ಹಿರಿಯ ರೈತ ಹೋರಾಟಗಾರ ಜೆ.ಎಂ.ವೀರಸಂಗಯ್ಯರವರ ಜೀವನಗಾಥೆಯನ್ನು ಬರಹದ ಮೂಲಕ ಕೃತಿ ತಂದಿರುವುದು ಶ್ಲಾಘನೀಯ. ಸಾಮಾಜಿಕ ಕಾರ್ಯಕ್ಕಾಗಿ ಜೀವನದುದ್ದಕ್ಕೂ ಹೋರಾಟಗಳನ್ನು ಕೈಗೊಂಡು ನೂರಾರು ಸಂಕಟ ಸವಾಲುಗಳನ್ನು ಎದುರಿಸಿದ್ದಾರೆ. ಮನೋಬಲ ಅನಾರೋಗ್ಯ ಮೆಟ್ಟಿ ನಿಲ್ಲುತ್ತದೆ ಎಂಬುದಕ್ಕೆ ಜೆ.ಎಂ.ವೀರಸಂಗಯ್ಯನವರು ಸಾಕ್ಷಿಯಾಗಿದ್ದಾರೆ. ಹೋರಾಟದಲ್ಲಿಯೇ ಮುಳುಗಿದ್ದ ವೀರಸಂಗಯ್ಯನವರ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾಗ ಸ್ವಂತ ಸಹೋದರ ಜೆ.ಎಂ.ರುದ್ರಮುನಿಸ್ವಾಮಿ ಕಿಡ್ನಿದಾನ ಮಾಡಿ ರೈತ ಹೋರಾಟಗಾರನಿಗೆ ಮರುಜನ್ಮ ನೀಡಿರುವುದು ಸ್ಮರಣೀಯ. ಸಂಘಟನೆಗಳ ಮೂಲಕ ರೈತರ ಸಮಸ್ಯೆಗಳನ್ನು ರಾಜ್ಯಮಟ್ಟದಲ್ಲಿ ಧ್ವನಿಯಾಗಿಸಿ ಸಮಸ್ಯೆಗಳನ್ನು ನಿವಾರಿಸುವಲ್ಲಿ ಜೆಎಂವೀ ಪಾತ್ರ ಹಿರಿದಿದೆ ಎಂದರು.  

ಲೇಖಕ ಹುರುಕಡ್ಲಿ ಶಿವಕುಮಾರ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ 1983ರಲ್ಲಿ ಕೂಲಿಗಾಗಿ ಕಾಳು ಯೋಜನೆ ಅನುಷ್ಠಾನದ ವೇಳೆ ರೈತರ ಸಂಕಷ್ಟಗಳನ್ನು ಕಂಡು ಹೋರಾಟ ಆರಂಭಿಸಿದರು. ಯುವಕರನ್ನು ಸಂಘಟಿಸಿ ಹೋರಾಟದ ಬಗ್ಗೆ ಮಾಹಿತಿ ನೀಡಿ ಸಿಪಿಐಎಂ ಪಕ್ಷವನ್ನು ತಾಲೂಕಿನಲ್ಲಿ ಕಟ್ಟಿದ್ದರು. ರಾಜ್ಯ ರೈತ ನಾಯಕರ ಸಂಪರ್ಕ ಬೆಳಿಸಿ, ಸಮಾಜದ ಹಿತಕ್ಕಾಗಿ ಹೋರಾಟ ಮಾಡಿ ಜೈಲು ಶಿಕ್ಷೆಗಳನ್ನು ಅನುಭವಿಸಿದ್ದಾರೆ. ಯುವಕರಿಗೆ ಹೋರಾಟದಲ್ಲಿ ತೊಡಗಿಸಿ ರಾಜ್ಯಮಟ್ಟದ ಹೋರಾಟಗಾರರಾಗಿ ಬೆಳೆದ ಜೆ.ಎಂ.ವೀರಸಂಗಯ್ಯರವರು ಯಶಸ್ವಿ ರೈತ ನೇತಾರ ಆಗಿದ್ದಾರೆ ಎಂದರು. 

ನಂದಿಪುರ ಡಾ.ಮಹೇಶ್ವರ ಸ್ವಾಮೀಜಿ, ಶಾಸಕ ಎಸ್‌.ಭೀಮಾನಾಯ್ಕ, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಹೈಕೋರ್ಟ್‌ ನ್ಯಾಯವಾದಿ ಅನಂತನಾಯ್ಕ, ದಲಿತ ಒಕ್ಕೂಟದ ಅಧ್ಯಕ್ಷ ಬಿ.ಚನ್ನಕೃಷ್ಣಪ್ಪ, ಸಮಾಜವಾದಿ ಚಿಂತಕ ರಾಬಿನ್ ಮ್ಯಾಥ್ಯೂ ಮಾತನಾಡಿದರು. ವೇದಿಕೆಯಲ್ಲಿ ಸಹಮತ ವೇದಿಕೆ ಅಧ್ಯಕ್ಷ ಜಿ.ಲಕ್ಷ್ಮೀಪತಿ, ಅಂಬೇಡ್ಕರ್ ಚಿಂತಕ ಹೆಗ್ಡಾಳ್ ರಾಮಣ್ಣ, ಸಮಾಜಸೇವಕ ಕುರಿ ಶಿವಮೂರ್ತಿ, ಪುರಸಭೆ ಸದಸ್ಯ ತೆಲಗಿ ಇಸ್ಮಾಯಿಲ್, ಕೃಷಿಕ ಸಮಾಜದ ಅಧ್ಯಕ್ಷ ಕೆ.ಪಿ.ದೇವರಾಜ್, ಬಿ.ಮಾಳಮ್ಮ, ಸಾಯಿರಾ ಬಾನು ವೇದಿಕೆಯಲ್ಲಿದ್ದರು. ಬಿ.ಗೋಣಿಬಸಪ್ಪ, ಬಿ.ಸಿದ್ದನಗೌಡ, ಪರಮೇಶ್ವರಯ್ಯ ಸೊಪ್ಪಿಮಠ ನಿರ್ವಹಿಸಿದರು. 


ಸುದ್ದಿ ಓದಿ