ಮಹಲಿಂಗಪುರ

ಸಮಯವೇ ಪಾಲಕರು ಮಕ್ಕಳಿಗಾಗಿ ನೀಡುವ ಶ್ರೇಷ್ಠ ಕಾಣಿಕೆ: ಲೆ.ಜ. ಹಲಗಲಿ

ಸಮಯವೇ ಪಾಲಕರು ಮಕ್ಕಳಿಗಾಗಿ ನೀಡುವ ಶ್ರೇಷ್ಠ ಕಾಣಿಕೆ: ಲೆ.ಜ. ಹಲಗಲಿ

ಮಹಾಲಿಂಗಪುರ 17: ಪಾಲಕರು ಮಕ್ಕಳಿಗಾಗಿ ತಮ್ಮ ಸಮಯ ನೀಡುವುದೇ ಅವರಿಗೆ ನೀಡುವ ಶ್ರೇಷ್ಠ ಕಾಣಿಕೆ ಎಂದು ಭಾರತೀಯ ಸೇನೆಯ ಲೆ.ಜನರಲ್ ರಮೇಶ ಹಲಗಲಿ ಹೇಳಿದರು. 

ಸಮೀಪದ ರನ್ನಬೇಲಗಲಿಯ ಢಪಳಾಪುರ ವಿದ್ಯಾವಿಹಾರ ಸಿಬಿಎಸ್‌ಇ ಶಾಲೆಯಲ್ಲಿ ಮಕ್ಕಳ ದಿನಾಚರಣೆಯಲ್ಲಿ ಕ್ಲಾಸ್ ರೂಮ್ ಟು ಕಮ್ಯೂನಿಟಿ ವಿಷಯದ ಮೇಲೆ ಉಪನ್ಯಾಸ ನೀಡಿ ಮಾತನಾಡಿದ ಅವರು,ಮಕ್ಕಳೇ ದೇಶದ ಶಕ್ತಿ ಕೇಂದ್ರ, ಒಂದು ದೇಶದ ಭವಿಷ್ಯ ಆ ದೇಶದ ಮಕ್ಕಳನ್ನು ಅವಲಂಬಿಸಿರುತ್ತದೆ. ಮಕ್ಕಳಿಗೆ ಸಲ್ಲದ ಗಿಫ್ಟ್‌ ನೀಡುವುದಕ್ಕಿಂತ ಮಕ್ಕಳು ಅವರಿಗೆ ಸಮಯ ನೀಡಿ ಸದಾ ಹೊಸತನ್ನು ಯೋಚಿಸುವಂತೆ ಪ್ರೇರೇಪಿಸಬೇಕು, ಗುಡ್ಡದ ಆಚೆ ಇರುವುದನ್ನು ನೋಡುವ ಶಕ್ತಿ ಬರಬೇಕು,ಅವರ ಭವಿಷ್ಯ ರೂಪಿಸು ಶಕ್ತಿ ಪಾಲಕರ ಕೈಯಲ್ಲಿದೆ,  ಮಕ್ಕಳಿರುವಾಗ ಮನೆ ಶಾಂತವಾಗಿ ದೇವಸ್ಥಾನದಂತಿರಬೇಕು. 

ಮಕ್ಕಳಲ್ಲಿ ಪ್ರಾಮಾಣಿಕತೆ ಮತ್ತು ಆತ್ಮ ಗೌರವ ಬೆಳೆಸುವುದು ಬಹು ಮುಖ್ಯ , ತಿಂಗಳಿಗೊಮ್ಮೆಯಾದರೂ ಇವುಗಳ ಹೇಳಿ, ಧನಾತ್ಮ ವರ್ತನೆ ಬೆಳೆಸಿ ಎಂದರು. ವಿದ್ಯಾರ್ಹತೆಗಿಂತ ಕೌಶಲ್ಯಗಳು ಮುಖ್ಯ, ಭಾರತ ಜಗತ್ತಿನ ಶ್ರೇಷ್ಠ ಸೈನ್ಯ ಹೊಂದಿರುವ ಬಲಾಢ್ಯ ರಾಷ್ಟ್ರದ ಪ್ರಜೆಗಳು ನಾವೆಂಬ ಹೆಮ್ಮೆ ಇರಲಿ ಎಂದರು. 

ಸಂಸ್ಥೆಯ ಕಾರ್ಯದರ್ಶಿ ವಿವೇಕ ಢಪಳಾಪುರ ಪ್ರಾಸ್ತಾವಿಕವಾಗಿ ಮಾತನಾಡಿ, ನಿರಂತರ ನಾಲ್ಕು ವರ್ಷಗಳ ಪ್ರಯತ್ನದ ಫಲವಾಗಿ ಭಾರತೀಯ ಸೇನೆಯ ಉಪದಂಡನಾಯಕರು ನಮ್ಮ ಶಾಲೆಗೆ ಬಂದಿದ್ದಾರೆ. ಇದು ಈ ಮಕ್ಕಳು ಮತ್ತು ಪಾಲಕರ ಸೌಭಾಗ್ಯ ಎಂದ ಅವರು, ಇಂದು ಗೂಗಲ್‌ನಲ್ಲಿ ಎಲ್ಲಾ ಮಹಿತಿ ಸಿಗುವಾಗಲೂ ತರಗತಿ ಮತ್ತು ಶಿಕ್ಷಕರ ಪಾತ್ರ ದೊಡ್ಡದು, ಗೂಗಲ್ ಕೇವಲ ಮಾಹಿತಿ ಒದಗಿಸಬಲ್ಲದು ಆದರೆ ಶಿಕ್ಷಕರು ಮಾತ್ರ ಒಬ್ಬ ಅಬ್ದುಲ್ ಕಲಾಂ, ರವಿಶಂಕರ್ ಗುರೂಜಿ, ಸಚಿನ್ ತೆಂಡೂಲ್ಕರ್ ಸೃಷ್ಠಿಸಬಲ್ಲರು ಎಂದರು. ಒಂದು ಶಾಲೆಯ ಶೌಚಾಲಯದ ಸ್ವಚ್ಛತೆಯ ಆ ಶಾಲೆಯ ಗುಣಮಟ್ಟ ಮತ್ತು ಶಿಸ್ತಿನ ಪ್ರತಿರೂಪವಾಗಿರುತ್ತದೆ ಎಂದರು. 

ಯುಕೆಜಿ ವಿದ್ಯಾರ್ಥಿಗಳಾದ ಸಮೃದ್ಧಿ ಕೋಟಿ, ಪ್ರಣವಿ ನೇಮಿನಾಥ, ಆಯುಶ್ ಕಾಖಡೆ ಎ ಟು ಜಡ್ ವರೆಗೆ ದೇಶದ ಹೆಸರು, ಪೌರಾಣಿಕ ಪುರುಷರ ಹೆಸರು, ಸ್ವಾತಂತ್ರ್ಯ ಹೋರಾಟಗಾರರ ಹೆಸರು ಹೇಳಿ ಗಮನ ಸೆಳೆದರು. ಪ್ರಾಂಶುಪಾಲ ಲೂಯೀಸ್ ಬೆರೆಟ್ಟೋ ಮತ್ತು ಇತರರಿದ್ದರು.ಶಿಕ್ಷಕಿ ಮಾನಸ ನಿರೂಪಿಸಿದರು. 


ಸುದ್ದಿ ಓದಿ