ಹಸೆಮನೆ ಹತ್ತಬೇಕಿದ್ದವರು ಸಾವಿಗೆ ಶರಣು : ಬೆಳಗಾವಿಯಲ್ಲಿ ಯುವಕ ಉ. ಪ್ರದೇಶದಲ್ಲಿ ಯುವತಿ ನೇಣು ಬಿಗಿದು ಆತ್ಮಹತ್ಯೆ
ಬೆಳಗಾವಿ : ತಾನು ಮದುವೆ ಆಗಬೇಕಿದ್ದ ಯುವತಿ ಉ. ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಉತ್ತರ ಪ್ರದೇಶ ಮೂಲದ ಯುವನೋರ್ವ ಬೆಳಗಾವಿಯಲ್ಲಿ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಯುವಕ-ಯುವತಿಗೆ ವಿವಾಹ ನಿಶ್ಚಯವಾಗಿತ್ತು, ಆದರೆ, ಮದುವೆಯಾಗುವ ಮುನ್ನವೇ ಯುವತಿ ತನ್ನ ಆರೋಗ್ಯ ಸಮಸ್ಯೆ ಕಾರಣಕ್ಕೆ ವೈದ್ಯರ ಬಳಿ ಹೋಗಿದ್ದಳು. ಭವಿಷ್ಯದಲ್ಲಿ ಎದುರಾಗುವ ಸಂಕಟಕ್ಕೆ ವೈದ್ಯರ ಬಳಿ ತಪಾಸಣೆ ನಡೆಸಿದಾಗ ಅವಳಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಇದರಿಂದ ಮನನೊಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸುದ್ದಿ ತಿಳಿದ ಯುವಕನು ಸಹಾ ಬೆಳಗಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಳಗಾವಿಯಲ್ಲಿ ಬಟ್ಟೆ ವ್ಯಾಪಾರದ ಸಲುವಾಗಿ ನೆಲೆಸಿದ್ದ 27 ವರ್ಷದ ತರುಣ ಆವೇಶ್ ಜುಬೇರ ಪಠಾಣ ರವಿವಾರ ಬೆಳಗಾವಿಯ ಚಿರಾಗ್ ನಗರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಫತೇಪುರದಲ್ಲಿ ಮದುವೆಯಾಗಬೇಕಿದ್ದ ಹುಡುಗಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಈತ ಬೆಳಗಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಗಾವಿ ಖಡೇ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.