‘ಸಮಾಜ ಸುಂದರೀಕರಿಣ ಮಾಡುವ ಪೌರಕಾರ್ಮಿಕರಿಗೆ ಸೌಕರ್ಯಗಳಿಲ್ಲ’
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 07: ಪುರಸಭೆ ವ್ಯಾಪ್ತಿಯಲ್ಲಿ ಪಟ್ಟಣವನ್ನು ಸ್ವಚ್ಛಗೊಳಿಸಿ ಸಮಾಜವನ್ನು ಸುಂದರೀಕರಣ ಮಾಡುವ ಪೌರಕಾರ್ಮಿಕರ ಜೀವನ ನಿರ್ವಹಣೆಯೆ ಮೂಲಭೂತ ಸೌಲಭ್ಯಗಳು ಲಭ್ಯವಿಲ್ಲದಂತಾಗಿದೆ ಎಂದು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ರಾಜ್ಯಾಧ್ಯಕ್ಷ ಎಚ್.ಹನುಮಂತಪ್ಪ ಆರೋಪಿಸಿದರು.
ಭಾನುವಾರ ಪೌರಕಾರ್ಮಿಕರು ವಾಸಿಸುವ ಕಾಲೂನಿಗಳಿಗೆ ಭೇಟಿ ನೀಡಿ ಮಾತನಾಡಿದರು. ನಮ್ಮ ವಿಜಯನಗರ ಜಿಲ್ಲೆಯಲ್ಲಿ ಅವಳಿ ಕ್ಷೇತ್ರಗಳು ಹೂವಿನ ಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮೀಸಲಿರುವ ಕ್ಷೇತ್ರಗಳಾಗಿವೆ. ಅದರಲ್ಲೂ ಅತಿ ಹೆಚ್ಚು ನಮ್ಮ ಸಮುದಾಯವನ್ನೇ ಹೊಂದಿರುವ ಕ್ಷೇತ್ರಗಳಾಗಿವೆ. ಅಂತಹ ಕ್ಷೇತ್ರದ ತಾಲೂಕು ಕೇಂದ್ರಗಳಲ್ಲಿ ಪೌರಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳ ಆಡಳಿಂದ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ನಿರ್ಲಕ್ಷ ತಾಳಿವೆ ಎಂದು ದೂರಿದರು. ಬರೀ ಸ್ಥಳೀಯ ಆಡಳಿತವಷ್ಟೇ ಅಲ್ಲದೆ ಕ್ಷೇತ್ರದ ಶಾಸಕ ಭೀಮಾನಾಯ್ಕ್ ಸಹ ನಿರ್ಲಕ್ಷ್ಯ ವಹಿಸಿದ್ದಾರೆ. ಪೌರಕಾರ್ಮಿಕರು ವಾಸಮಾಡುವ ಸ್ಥಳಗಳನ್ನು ನೋಡಿದ ಬಳಿಕ ಸರಿಯಾದ ರಸ್ತೆಗಳಿಲ್ಲ, ಚರಂಡಿಗಳಿಲ್ಲ, ಶುದ್ಧ ಕುಡಿಯುವ ನೀರಿನ ಘಟಕಗಳಿಲ್ಲ, ಬೀದಿ ದೀಪಗಳಿಲ್ಲ ಹೀಗೆ ಮನೆಗಳು ಸಹ ನೋಡುವಂತಿಲ್ಲ ಅಂತಹ ನಿರ್ಲಕ್ಷ್ಯಕೊಳಗಾಗಿರುವ ನಮ್ಮ ಜನರನ್ನು ನೋಡಿದರೆ ಮನಸಿಗೆ ಖೇದವಾಗುತ್ತದೆ ಎಂದರು. ಇನ್ನು 15ದಿನಗಳೊಳಗಾಗಿ ಸೌಲಭ್ಯಗಳನ್ನು ಕಲ್ಪಿಸುವಂತೆ ಎಚ್ಚರಿಕೆ ನೀಡಲಾಗಿದೆ ಎಂದರು. ಎಸ್.ಸಿ.ಕಾಲೂನಿಗೆ ಬರುವಂತ ಯೋಜನೆಯನ್ನು ಬೇರೆಡೆ ಕಾಮಗಾರಿ ವರ್ಗಾಹಿಸಲಾಗುತ್ತಿದೆ ಎನ್ನುವ ದೂರುಗಳು ಕೇಳಿಬರುತ್ತಿವೆ. ಮುಂದೆ ಅದೇ ರೀತಿಯಾದರೆ ಸರ್ಕಾರದ ಗಮನ ಸೆಳೆದು ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಸಿದ್ಧರಾಮಯ್ಯನವರು ಅನುಭವಿ ರಾಜಕಾರಣಿಯಾಗಿದ್ದು, ದಲಿತ ರಾಜಕಾರಣಿಗಳ ಬಗ್ಗೆ ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆಂದು ಹೇಳಿರುವುದು ಸಮಂಜಸವಲ್ಲ, ಅದಕ್ಕಾಗಿಯೇ ಸಿಂದಗಿ ಉಪಚುನಾವಣೆಯಲ್ಲಿ ತಕ್ಕಪಾಠ ಕಲಿಸಿದ್ದು, ಅವರು ಸಹ ಪಕ್ಷಬಿಟ್ಟು ಕಾಂಗ್ರೆಸ್ಗೆ ಹೋದವರೇ, ಮೊದಲು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದ ಅವರು ಕೂಡಲೆ ದಲಿತ ರಾಜಕಾರಣಿಗಳಲ್ಲಿ ಕ್ಷಮೆಯಾಚಿಸಬೇಕು ಎಂದರು.
ಜಿ.ಪಂ.ಮಾಜಿ ಸದಸ್ಯ ಕೆ.ಎಚ್.ಮಲ್ಲಿಕಾರ್ಜುನ ಮಾತನಾಡಿ, ಕೂಡಲೆ ಪೌರಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಉಪಸ್ಥಿತರಿದ್ದ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರು.
ಇದೇ ವೇಳೆ ರಾಮನಗರದ ಕುರುದಗಡ್ಡಿ ಹಾಗೂ ಹಳೇ ಊರಿನ.ಕಾಲೂನಿಗಳಿಗೆ ಭೇಟೀನೀಡಿ ಪೌರಕಾರ್ಮಿಕರಲ್ಲಿ ಜಾಗೃತಿ ಮೂಡಿಸಿ, ಐರಾವತ ಯೋಜನೆಯಡಿ ಪೌರಕಾರ್ಮಿಕರ ಅವಲಂಬಿತ ನಿರುದ್ಯೋಗಿಗಳಿಗೆ 5ಲಕ್ಷ ರೂ.ಗಳ ಸಹಾಯಧನದಲ್ಲಿ ಇಬ್ಬರಿಗೆ ಎರಡು ಕಾರ್ಗಳನ್ನು ವಿತರಿಸಲಾಯಿತು. ಪಂಚಮಸಾಲಿ ಜಿಲ್ಲಾಧ್ಯಕ್ಷ ಭದ್ರವಾಡಿ ಚಂದ್ರಶೇಖರ್, ಪುರಸಭೆ ಮಾಜಿ ಅಧ್ಯಕ್ಷ ಜೋಗಿ ಹನುಮಂತಪ್ಪ, ಬಿಜೆಪಿ ಎಸ್.ಸಿ.ಮೋರ್ಚಾಧ್ಯಕ್ಷ ಗಣೇಶ್, ಆನಂದಳ್ಳಿ ಕೊಟ್ರೇಶ್, ಮಲ್ಲಿಕಾರ್ಜುನ, ಮಹೇಶ್, ದುರುಗಪ್ಪ, ಹೇಮಣ್ಣ, ಪ್ರಶಾಂತ, ಪೂಜಾರ್ ಸಿದ್ದಪ್ಪ ಮತ್ತಿತರರು ಇದ್ದರು.