ಕವಲು ದಾರಿಯತ್ತ ಸಾಗಿದ ನೇಕಾರಿಕೆ ವೃತ್ತಿ : ಸಮಸ್ಯೆಯ ಸುಳಿಯಲ್ಲಿ ನೇಕಾರರ ಬದುಕು

ಕವಲು ದಾರಿಯತ್ತ ಸಾಗಿದ ನೇಕಾರಿಕೆ ವೃತ್ತಿ : ಸಮಸ್ಯೆಯ ಸುಳಿಯಲ್ಲಿ ನೇಕಾರರ ಬದುಕು

ಪಾರೇಶ ಭೋಸಲೆ 

ಬೆಳಗಾವಿ : ಇತ್ತ ಅವೈಜ್ಞಾನಿಕ ಜಿಎಸ್‌ಟಿ ಪದ್ಧತಿ, ಕಚ್ಚಾ ವಸ್ತುಗಳ ಬೆಲೆ ಹೆಚ್ಚಳ, ಅತ್ತ ವಿದ್ಯುತ್ ಅಭಾವ, ಇನ್ನೊಂದೆಡೆ ಸರಕಾರದಿಂದ ಸಿಗದ ಮೂಲಭೂತ ಸೌಕರ್ಯಗಳು, ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದಿಂದ ಕಂಗೆಟ್ಟು, ಹತ್ತು ಹಲವಾರು ಸಮಸ್ಯೆಯ ಸುಳಿಯಲ್ಲಿ ಸಿಕ್ಕು ನಲಗುತ್ತಿರುವ ನೇಕಾರ ಸಮುದಾಯದ ಯುವಪೀಳಿಗೆ ಬೇರೆ ಉದ್ಯಮದ ಕಡೆಗೆ ಮುಖ ಮಾಡಿದ ಹಿನ್ನೆಲೆಯಲ್ಲಿ ವಿದ್ಯುತ್‌ಚಾಲಿತ ಮತ್ತು ಕೈಮಗ್ಗ ನೇಕಾರಿಕೆಯು ಕವಲುದಾರಿಯತ್ತ ಸಾಗಿದೆ.  


    ಹೌದು ಓದುಗರೇ.... ನೇಕಾರಿಕೆ ವಲಯದಲ್ಲಿ ದೊಡ್ಡ ದೊಡ್ಡ ಕಂಪನಿಗಳು ಮತ್ತು ಆಧುನಿಕ ಮಗ್ಗಗಳ ಹಾವಳಿಯಿಂದ ಕಟ್ಟು ಕಡೆಯ ಅಂದರೆ ಕೈಮಗ್ಗ ಹಾಗೂ ವಿದ್ಯುತ್‌ಚಾಲಿತ ನೇಕಾರರು ನರಕ ಅನುಭವಿಸುವಂತಾಗಿದ್ದು, ಸರಕಾರಗಳು ಕೈಮಗ್ಗ ಮತ್ತು ವಿದ್ಯುತ್ ಚಾಲಿತ ನೇಕಾರರ ನೆರವಿಗೆ ಬಂದರೆ ಮಾತ್ರ ನೇಕಾರಿಕೆ ವೃತ್ತಿ ಉಳಿಯುತ್ತದೆ, ಇಲ್ಲವಾದಲ್ಲಿ ನೇಕಾರಿಕೆ ಒಂದು ನೆನಪಾಗಿ ಉಳಿಯಲಿದೆ ಎನ್ನುವದನ್ನು ಇಲ್ಲಿ ಅಲ್ಲಗಳಿಯುವಂತಿಲ್ಲ.

     ನೇಕಾರರ ಜೀವನ ಸದ್ಯ ಮುಳ್ಳಿನ ಹಾಸಿಗೆಯ ಮೇಲೆ ಮಲಗಿದಂತಿದ್ದು, ನೇಕಾರ ಸಮಾಜದ ಅಭಿವೃದ್ಧಿಗೆ ಮತ್ತು ನೇಕಾರಿಕೆ ಸೌಲಭ್ಯಗಳಿಗಾಗಿ ಇರುವ ರಾಜ್ಯದ ಮೂರು ನಿಗಮಗಳು ಮತ್ತು ಕೇಂದ್ರದ ಎರಡು ನಿಗಮಗಳು ಸೇರಿದಂತೆ ಒಂದು ಇಲಾಖೆಯು ಇವರ ಪಾಲಿಗೆ ಇದ್ದು ಇಲ್ಲದಂತಾಗಿರುವದು ಈ ನೇಕಾರರ ಬದುಕು ಬೀದಿಗೆ ಬರಲು ಈ ಅಂಶವು ಕೂಡಾ ಒಂದು ಕಾರಣ ಎನ್ನಲಾಗುತ್ತಿದೆ.

     ಅದೇ ರೀತಿ ನೇಕಾರ ಸಮಾಜದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇದ್ದು, ಅದರಲ್ಲಿ ನೇಕಾರಿಕೆ ಕೆಲಸದವ ಎನ್ನುವ ಕಾರಣದಿಂದ ಕೆಲವರು ಕನ್ಯಾ (ಹೆಣ್ಣು) ಕೊಡಲು ಕೂಡಾ ಹಿಂದೇಟು ಹಾಕುತ್ತಿರುವದರಿಂದ ಇಂದಿನ ಯುವಪೀಳಿಗೆಯು ನೇಕಾರಿಕೆ ಬಿಟ್ಟು ಬೇರೆ ಉದ್ಯಮದ ಕಡೆಗೆ ಮುಖ ಮಾಡಲು ಇದು ಒಂದು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

     ಸದ್ಯ ಗುಜರಾತಿನಿಂದ ರಾಜ್ಯಕ್ಕೆ ಕಚ್ಚಾ ವಸ್ತುಗಳನ್ನು ತರಿಸಿಕೊಳ್ಳಲಾಗುತ್ತಿದ್ದು, ಪಕ್ಕಾ ಮತ್ತು ಕಚ್ಚಾ ವಸ್ತುಗಳ ಮೇಲೆ ಹಿಡಿತ ಇಲ್ಲದ ಕಾರಣ ನೇಕಾರರ ಬದುಕು ಅದೋಗತಿಗೆ ಬರಲು ಇದೊಂದು ಕಾರಣ ಎನ್ನಲಾಗುತ್ತಿದೆ. ನೇಕಾರಿಕೆಯ ಕಚ್ಚಾ ವಸ್ತು ತರಿಸಿ ಅದನ್ನು ಪಕ್ಕಾ ವಸ್ತುವನ್ನಾಗಿ ಮಾಡಲಾಗುತ್ತದೆ. ಉದಾರಣೆಗಾಗಿ ಕಚ್ಚಾ ವಸ್ತುವನ್ನು ಪಕ್ಕಾ ವಸ್ತುವಾಗಿ ಮಾರ್ಪಾಡು ಮಾಡಿದ ಬಳಿಕ ನೇಕಾರರಿಗೆ 1000 ರಿಂದ 1200 ರೂ.ವರೆಗೆ ಕೂಲಿ ಸಿಗಬೇಕಾಗುತ್ತದೆ ಆದರೆ ಇಲ್ಲಿ ದಿನಕ್ಕೆ 200ರಿಂದ 300 ರೂ. ವರೆಗೆ ದಿನದ ಕೂಲಿ ದೊರೆಯುತ್ತಿದೆ. ನೇಕಾರರ ಈ ದುಡಿತಕ್ಕೆ ತಕ್ಕಂತೆ ಸಂಬಳ ಸಿಗುತ್ತಿಲ್ಲ ಎನ್ನುವದು ನೇಕಾರರ ನೋವಾಗಿದೆ.

   ಕೈಮಗ್ಗ ನೇಕಾರರು ದಿನ ಒಂದಕ್ಕೆ 1 ಸೀರೆಯನ್ನು ನೇಯಬಹುದು, ವಿದ್ಯುತ್ ಚಾಲಿತ ಮಗ್ಗದಿಂದ ದಿನ ಒಂದಕ್ಕೆ 3 ಸೀರೆ ನೇಯಬಹುದು ಆದರೆ ದೊಡ್ಡ ಕಂಪನಿಗಳು ದಿನಕ್ಕೆ 100 ಸೀರೆಗಳನ್ನು ತಯಾರಿಸುತ್ತಾರೆ ಇದರಿಂದ ಕೂಡಾ ನೇಕಾರರ ಕುಲಕಸಬು ಹೊಡೆತದ ಸುಳಿಯಲ್ಲಿ ಸಿಕ್ಕು ನರಳುವಂತಾಗಿದೆ.

ನ್ಯಾಯಕ್ಕಾಗಿ ಬೆಳಗಾವಿಯ ಸುವರ್ಣ ಸೌಧ ಚಲೋ

    ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಆಶ್ರಯದಲ್ಲಿ ವೃತ್ತಿಪರ ನೇಕಾರರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಮತ್ತು ಕಟ್ಟಕಡೆಯ ನೇಕಾರರಿಗೆ ಆಗುತ್ತಿರುವ ಅನ್ಯಾಯದ ಕುರಿತು ಬುಧವಾರ ದಿ. 17-12-2025ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಬೆಳಗಾವಿ ಬಾಗಲಕೋಟೆ ಗದಗ ಕೊಪ್ಪಳ ಧಾರವಾಡ ವಿಜಯಪುರ ತುಮಕೂರು ದೊಡ್ಡಬಳ್ಳಾಪುರ ಬೆಂಗಳೂರು ಹಾಗೂ ಇನ್ನುಳಿದ ಎಲ್ಲ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ನೇಕಾರರು ಇದರಲ್ಲಿ ಭಾಗವಹಿಸಿ ವಹಿಸಿ ನೇಕಾರಿಕೆ ವೃತ್ತಿ ಉಳಿವಿನ ಹೋರಾಟಕ್ಕಾಗಿ ಕೈ ಜೋಡಿಸಿ ಎಂದು ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘ ಅಧ್ಯಕ್ಷ ಶಿವಲಿಂಗ್ ಜಿ. ಟಿರ್ಕಿ ಅವರು ವಿನಂತಿಸಿದ್ದಾರೆ.





ಸುದ್ದಿ ಓದಿ