ಶೈಕ್ಷಣಿಕ ಗುಣಮಟ್ಟ, ಆಕರ್ಷಕ ಪರಿಸರ ಹಾಗೂ ವಿದ್ಯಾರ್ಥಿ ಸ್ನೇಹಿ ವಾತಾವರಣದಿಂದ ಗಮನ ಸೆಳೆಯುತ್ತಿರುವ ಶಾಲೆ
ರಾಣೆಬೆನ್ನೂರು 30: ತಾಲ್ಲೂಕಿನ ಹಲಗೇರಿ ಗ್ರಾಮದ ಏಕೈಕ ಸರ್ಕಾರಿ ಉರ್ದು ಪ್ರೌಢಶಾಲೆ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಿಂದ ಅಭಿವೃದ್ಧಿಗೊಂಡು ಹೊಸ ರೂಪ ಪಡೆದಿದೆ. ಶಾಲೆಯ ಕಟ್ಟಡದ ಸುಂದರೀಕರಣ, ಬಣ್ಣ ಬಳಿಯುವಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಿಂದ ಶಾಲೆ ಆಕರ್ಷಕವಾಗಿ ಕಂಗೊಳಿಸುತ್ತಿದ್ದು, ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ಶಾಸಕ ಪ್ರಕಾಶ ಕೋಳಿವಾಡ ಅವರು ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಶಾಲೆಯ ಅಭಿವೃದ್ಧಿಗೆ ವಿಶೇಷ ನೆರವು ನೀಡಿದ್ದು, ಇದರ ಪರಿಣಾಮವಾಗಿ ಶೈಕ್ಷಣಿಕ ಗುಣಮಟ್ಟದ ಜೊತೆಗೆ ವಿದ್ಯಾರ್ಥಿ ಸ್ನೇಹಿ ವಾತಾವರಣವೂ ನಿರ್ಮಾಣವಾಗಿದೆ. ಹಲಗೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಇಲ್ಲಿ ಉರ್ದು ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ.
ಅನುಭವಿ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಶಾಲೆಯ ಆವರಣದಲ್ಲಿ ಶೈಕ್ಷಣಿಕ ಚಿತ್ರಗಳು, ಪ್ರೇರಣಾದಾಯಕ ಸಂದೇಶಗಳು ಹಾಗೂ ಸ್ವಚ್ಛ ಪರಿಸರ ಕಲಿಕೆಗೆ ಪೂರಕ ವಾತಾವರಣವನ್ನು ನಿರ್ಮಿಸಿದ್ದು, ದಾಖಲಾತಿ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಕೆ ಮಾತನಾಡಿ, "ಶಾಸಕ ಪ್ರಕಾಶ ಕೋಳಿವಾಡ ಅವರ ಸಹಕಾರದಿಂದ ಶಾಲೆಯ ಅಭಿವೃದ್ಧಿಗೆ ಹೊಸ ಚೈತನ್ಯ ದೊರೆತಿದೆ. ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ. ಹೆಚ್ಚಿನ ವಿದ್ಯಾರ್ಥಿಗಳು ಸರ್ಕಾರಿ ಶಿಕ್ಷಣದ ಸೌಲಭ್ಯ ಪಡೆಯುವಂತಾಗಬೇಕು ಎಂಬುದು ನಮ್ಮ ಆಶಯ," ಎಂದು ಹೇಳಿದರು.
ಮುಖ್ಯಶಿಕ್ಷಕಿ ಚಿತ್ರಾವತಿ ಬೆನ್ನೂರು ಅವರು, "ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಾಣಗೊಂಡಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ," ಎಂದು ತಿಳಿಸಿದರು.
ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್ಡಿಎಂಸಿ) ಅಧ್ಯಕ್ಷ ಮುಜಮಿಲ್ ಖತೀಬ್ ಮಾತನಾಡಿ, "ಶಾಸಕರ ಅನುದಾನ, ಶಿಕ್ಷಣ ಇಲಾಖೆಯ ಸಹಕಾರ, ಶಿಕ್ಷಕರ ಸಮರೆ್ಣ ಹಾಗೂ ಪೋಷಕರ ವಿಶ್ವಾಸದಿಂದ ಹಲಗೇರಿ ಸರ್ಕಾರಿ ಉರ್ದು ಪ್ರೌಢಶಾಲೆ ಇಂದು ತಾಲ್ಲೂಕಿನ ಮಾದರಿ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ. ವಿದ್ಯಾರ್ಥಿಗಳಿಗೆ ಜ್ಞಾನ, ಸಂಸ್ಕಾರ ಹಾಗೂ ಉತ್ತಮ ಭವಿಷ್ಯ ರೂಪಿಸುವ ಕೇಂದ್ರವಾಗಿ ಶಾಲೆ ಬೆಳೆಯುತ್ತಿದೆ," ಎಂದು ಹೇಳಿದರು.