ಶಾಲೆಗಳ ಪ್ರಗತಿಯಲ್ಲಿ ಎಸ್ಡಿಎಂಸಿ ಪಾತ್ರ ಬಹುಮುಖ್ಯ: ರೋಣದ
ಮಹಾಲಿಂಗಪುರ 24: ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಅಗತ್ಯ ಸೌಲಭ್ಯಗಳು, ಸರಕಾರದ ಶೈಕ್ಷಣಿಕ ಯೋಜನೆಗಳು ಸರಿಯಾಗಿ ಮಕ್ಕಳಿಗೆ ತಲುಪುವಲ್ಲಿ, ಶಾಲೆಗಳ ಪ್ರಗತಿಯಲ್ಲಿ ಎಸ್ಡಿಎಂಸಿ ಪಾತ್ರ ಬಹುಮುಖ್ಯವಾದುದು ಎಂದು ಚಿಮ್ಮಡ ಸರಕಾರಿ ಹೆಣ್ಣು ಮಕ್ಕಳ ಮಾದರಿ ಶಾಲೆಯ ಮುಖ್ಯೋಪಾಧ್ಯಾಯರು ಸಂಪನ್ಮೂಲ ವ್ಯಕ್ತಿ ಆರ್.ಎಸ್.ರೋಣದ ಹೇಳಿದರು.
ಚಿಮ್ಮಡದ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಜಾಂಗನೂರ ತೋಟದ ಶಾಲೆಯಲ್ಲಿ ಮಂಗಳವಾರ ನಡೆದ ಎಸ್ಡಿಎಂಸಿ ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಎಸ್ಡಿಎಂಸಿ ರಚನೆ, ವಿಧಿವಿಧಾನಗಳು, ಎಸ್ಡಿಪಿ ತಯಾರಿ, ಮಕ್ಕಳ ಸುರಕ್ಷತಾ ಕ್ರಮಗಳ ಕುರಿತು ಎಸ್ಡಿಎಂಸಿ ಸದಸ್ಯರ ಜವಾಬ್ದಾರಿಗಳನ್ನು ವಿವರಿಸಿದರು.
ನಿವೃತ್ತ ಪ್ರಾಚಾರ್ಯ ಸಾಹಿತಿ ರಬಕವಿಯ ಮೃತ್ಯುಂಜಯ ರಾಮದುರ್ಗ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಶಾಲೆಗಳಲ್ಲಿ ಆರೋಗ್ಯಪೂರ್ಣ, ಮಕ್ಕಳ ಜ್ಞಾನ ಹೆಚ್ಚಿಸುವ, ಉತ್ಸಾಹ ಮೂಡಿಸುವ ಕ್ರಿಯಾಶೀಲ ಚಟುವಟಿಕೆಗಳು ನಿರಂತರ ನಡೆಯಬೇಕು. ಮಕ್ಕಳ ಪ್ರಗತಿ ಬಗ್ಗೆ ಎಸ್ಡಿಎಂಸಿಯವರು, ಪಾಲಕರು ಗಮನಹರಿಸಬೇಕು. ಮಕ್ಕಳ ದಾಖಲಾತಿ ಹೆಚ್ಚಿಸಲು ಪ್ರಯತ್ನಿಸಬೇಕು ಎಂದರು.
ಎಸ್ಡಿಎಂಸಿ ಅಧ್ಯಕ್ಷ ಮಲ್ಲಪ್ಪ ಜಾಂಗನೂರ ಅಧ್ಯಕ್ಷತೆ ವಹಿಸಿ, ಶಾಲೆಗಳಲ್ಲಿ ಮಕ್ಕಳಿಗೆ ನೀರಿನ ಸಮಸ್ಯೆ, ಬೋರವೆಲ್ ರಿಪೇರಿ ಹಲವಾರು ತೊಂದರೆಗಳು ಬಂದಾಗ ಸಂಬಂಧಿಸಿದ ಇಲಾಖೆಯವರು, ಗ್ರಾಮ ಪಂಚಾಯತಿಯವರು ಸ್ಪಂದಿಸಬೇಕು. ಎಲ್ಲರೂ ಕೈ ಜೋಡಿಸಿದಾಗ ಶಾಲಾಭಿವೃದ್ಧಿ ಸಾಧ್ಯ ಎಂದರು.
ಸಂಪನ್ಮೂಲ ವ್ಯಕ್ತಿ ವೀರಭದ್ರಪ್ಪ ಎನ್.ಎ. ಮಾತನಾಡಿ ಗುಣಾತ್ಮಕ ಶಿಕ್ಷಣದಲ್ಲಿ ಎಸ್ಡಿಎಂಸಿ ಕಾರ್ಯಗಳು, ಸರ್ಕಾರದ ಪ್ರೋತ್ಸಾಹಕ ಕಾರ್ಯಕ್ರಮಗಳು, ಸಮುದಾಯದತ್ತ ಶಾಲೆ, ಸಿಸಿಇ, ಹೆಣ್ಣುಮಕ್ಕಳ ಕಾಳಜಿ, ಶೈಕ್ಷಣಿಕ ಕಾರ್ಯ ಯೋಜನೆಗಳ ಕುರಿತು ಎಸ್ಡಿಎಂಸಿಯವರ ಗಮನ ಸೆಳೆದರು.
ಗ್ರಾಮ ಪಂಚಾಯತ ಸದಸ್ಯ ಸಿದಗಿರೆಪ್ಪ ಜಾಂಗನೂರ, ಎಸ್ಡಿಎಂಸಿ ಉಪಾಧ್ಯಕ್ಷ ಮಲ್ಲಪ್ಪ ಪಾಟೀಲ, ಬಾಳೇಶಗೌಡ ಗಡೆಪ್ಪನವರ, ಮಹಾಲಿಂಗ ಗಾಣಿಗೇರ, ದುಂಡಪ್ಪ ಉಳ್ಳಾಗಡ್ಡಿ, ಪ್ರಕಾಶ ಬಸ್ತವಾಡ, ಸಿದಗಿರೆಪ್ಪ ಹುದ್ದಾರ, ಪರಸಪ್ಪ ಪಾಟೀಲ, ಶ್ರೀಶೈಲ ಮಠಗಾರ, ಶಿವಲೀಲಾ ಜಾಂಗನೂರ, ಮಹಾದೇವಿ ತೇಲಿ, ಮಹಾನಂದಾ ಜಾಂಗನೂರ, ಸುಶೀಲಾ ಜಾಂಗನೂರ, ಮಹಾದೇವಿ ತೋಳಮಟ್ಟಿ, ರೇಣುಕಾ ಜಾಂಗನೂರ, ಶಾಂತಾ ಪಾಟೀಲ ಸೇರಿದಂತೆ ಎಸ್ಡಿಎಂಸಿ ಸರ್ವಸದಸ್ಯರು ಭಾಗವಹಿಸಿದ್ದರು.
ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಎಸ್ಡಿಎಂಸಿ ಸದಸ್ಯರಿಗೆ ವಿವಿಧ ಸಂತಸದಾಯಕ ಆಟ, ಚಟುವಟಿಕೆಗಳು, ಸಂವಾದ, ಪರಸ್ಪರ ಚರ್ಚೆಗಳು ನಡೆದವು.
ಶಿಕ್ಷಕ ಮ.ಕೃ.ಮೇಗಾಡಿ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕ ಎಸ್.ಆರ್.ಧರ್ಮಟ್ಟಿ ವಂದಿಸಿದರು.