ಮತದಾರರ ಪಟ್ಟಿಯ ನಿಖರತೆಗೆ ಬಿಎಲ್‌ಒಗಳ ಪಾತ್ರ ಮಹತ್ವದ್ದು: ಉಪವಿಭಾಗಾಧಿಕಾರಿ ಸುಭಾಷ್ ಸಂಪಗಾವಿ
ಮತದಾರರ ಪಟ್ಟಿಯ ನಿಖರತೆಗೆ ಬಿಎಲ್‌ಒಗಳ ಪಾತ್ರ ಮಹತ್ವದ್ದು: ಉಪವಿಭಾಗಾಧಿಕಾರಿ ಸುಭಾಷ್ ಸಂಪಗಾವಿ
ಚಿಕ್ಕೋಡಿ, ಜು.16: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವನ್ನು ಪ್ರತಿಯೊಬ್ಬ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಜವಾಬ್ದಾರಿಯಿಂದ ಹಾಗೂ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕು ಎಂದು ಉಪವಿಭಾಗಾಧಿಕಾರಿ ಸುಭಾಷ್ ಸಂಪಗಾವಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್‌ಐಆರ್ ಕಾರ್ಯವನ್ನು ಶೇ.100ರಷ್ಟು ಪೂರ್ಣಗೊಳಿಸಿದ ಬಿಎಲ್‌ಒಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಚಿಕ್ಕೋಡಿ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಬಿಎಲ್‌ಒಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಕಡಿಮೆ ಅವಧಿಯಲ್ಲೇ 12 ಮಂದಿ ಬಿಎಲ್‌ಒಗಳು ಶೇ.100ರಷ್ಟು ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯ ನಿಖರತೆ ಅತ್ಯಂತ ಮಹತ್ವದ್ದಾಗಿದೆ. ಈ ಜವಾಬ್ದಾರಿಯನ್ನು ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯಿಂದ ನಿರ್ವಹಿಸಿರುವ ಬಿಎಲ್‌ಒಗಳ ಕಾರ್ಯ ಶ್ಲಾಘನೀಯವಾಗಿದೆ. ಅವರ ಸೇವೆಯಿಂದ ಚುನಾವಣಾ ವ್ಯವಸ್ಥೆ ಇನ್ನಷ್ಟು ಬಲಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶೇ.100ರಷ್ಟು ಎಸ್‌ಐಆರ್ ಕಾರ್ಯ ಪೂರ್ಣಗೊಳಿಸಿದ ಬಿಎಲ್‌ಒಗಳಾದ ಜ್ಯೋತಿ ಎನ್., ರಾಹುಲ್ ಐನಾಪುರ, ನರಸಗೌಡ ಪಾಟೀಲ, ಅಜಿತ್ ಖಾಡೆ, ರಮೇಶ್ ಗುರವ, ಬಿ.ಎಸ್. ಜಕಾತಿ, ಶೀತಲ್, ಮಂಜುನಾಥ ಕೆ.ಎಂ. ಸೇರಿದಂತೆ ಒಟ್ಟು 12 ಮಂದಿಯನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಎ. ಕುಂಬಾರ, ತಹಶೀಲ್ದಾರ್ ರಾಜೇಶ್ ಬುಳ್ಳಿ, ಡಿಡಿಪಿಐ ಸೀತಾರಾಮು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಡಿ. ನಾಯ್ಕವಾಡಿ, ನೋಡಲ್ ಅಧಿಕಾರಿ ಸಂತೋಷ ಕಾಂಬಳೆ, ಮಹಾದೇವ ಜನಗೌಡ ಹಾಗೂ ತರಬೇತಿದಾರ ಎ.ಬಿ. ಸೊಲ್ಲಾಪೂರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.