ಮಹಾಲಿಂಗಪುರದಲ್ಲಿ ಬಿರುಸುಗೊಂಡ ಸಿಐಡಿ ವಿಚಾರಣೆ. ಘಟಾನುಘಟಿಗಳ ತೀವ್ರ ವಿಚಾರಣೆ.
ಮಹಾಲಿಂಗಪುರ 04: ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಸಿಓಡಿ ತನಿಖೆ ಭಾನುವಾರ ಮತ್ತಷ್ಟು ಬಿರುಸು ಪಡೆದುಕೊಂಡಿದ್ದು ನಗರದ ಘಟಾನುಘಟಿ ನಾಯಕರು ಮತ್ತು ಪುರಸಭಾ ಸದಸ್ಯರನ್ನು ತೀವ್ರ ವಿಚಾರಣೆಗೊಳಪಡಿಸಲಾಯಿತು.
2020 ನ. 9 ರಂದು ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ವೇಳೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಡಿವೈಎಸ್ಪಿ ಸತ್ಯವತಿ ಅವರ ನೇತೃತ್ವದ ತಂಡ ಸ್ಥಳೀಯ ಜಿಎಲ್ ಬಿಸಿಯಲ್ಲಿ ಬೆಳಿಗ್ಗೆಯಿಂದಲೇ ಮಹಾಲಿಂಗಪುರ ಪುರಸಭೆಯ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರನ್ನು ಹಾಗೂ ನಾಯಕರನ್ನು ವಿಚಾರಣೆಗೆ ಒಳಪಡಿಸಲಾಯಿತು.
ಘಟನೆಗೆ ಸಂಬಂಧಿಸಿದಂತೆ 4ಪ್ರಕರಣಗಳನ್ನು ಕೈಗೆತ್ತಿಕೊಂಡಿರುವ ಸಿಐಡಿ ತಂಡ ಘಟನೆಗೆ ಸಂಬಂಧಿಸಿದ ಸಿಸಿ ಟಿವಿ ದೃಶ್ಯಗಳು, ದಾಖಲೆಗಳು, ದೂರುಗಳ ಬಗ್ಗೆ ಅತ್ಯಂತ ಕೂಲಂಕಷವಾಗಿ ವಿಚಾರಣೆ ನಡೆಸುತ್ತಿದ್ದು ಪ್ರತಿಯೊಬ್ಬರ ಹೇಳಿಕೆಗಳನ್ನು ರೆಕಾರ್ಡ್ ಮಾಡುತ್ತಿದ್ದು, ಒಟ್ಟು 93 ಜನರನ್ನು ವಿಚಾರಿಸಲಿದ್ದು ಇನ್ನೂ 2-3 ದಿನಗಳಲ್ಲಿ ನಗರದಲ್ಲಿ ವಿಚಾರಣೆಯ ಸದ್ದು ಸುದ್ದಿಯಾಗಲಿದೆ.
ಶನಿವಾರ ಪುರಸಭಾ ಅಧ್ಯಕ್ಷೆ ಸ್ನೇಹಲ್ ಅಂಗಡಿ, ಸದಸ್ಯರಾದ ಡಾ. ಸವಿತಾ ಕೋಳಿಗುಡ್ಡ, ಸರಸ್ವತಿ ರಾಮೋಜಿ, ಲಕ್ಷ್ಮೀ ಮುದ್ದಾಪುರ, ಹಾಗೂ ಪುರಸಭೆ ಅಧಿಕಾರಿಗಳನ್ನು ವಿಚಾರಣೆ ನಡೆಸಿದ್ದು ಭಾನುವಾರ ವಿಚಾರಣೆ ಮುಂದುವರಿಸಿ ಬಿಜೆಪಿಯ ವಿಪ್ ಉಲ್ಲಂಘನೆ ಆರೋಪದಡಿ ಜಿಲ್ಲಾಧಿಕಾರಿ ಸ್ತರದಲ್ಲಿ ಅನರ್ಹರಾಗಿರುವ ಸವಿತಾ ಹುರಕಡ್ಲಿ ಮತ್ತವರ ಪತಿ ಚನ್ನಬಸು ಹುರಕಡ್ಲಿ, ಚಾಂದನಿ ನಾಯಕ ಮತ್ತವರ ಮೈದುನ ಅರ್ಜುನ ನಾಯಕ, ಗೋದಾವರಿ ಬಾಟ ಮತ್ತವರ ಪತಿ ವಿರೂಪಾಕ್ಷ ಬಾಟ, ಇವರನ್ನು ತೀವ್ರ ವಿಚಾರಣೆ ನಡೆಸಿ, ಪುರಸಭಾ ಸದಸ್ಯರಾದ ಕಾಂಗ್ರೆಸ್ ನ ಯಲ್ಲನಗೌಡ ಪಾಟೀಲ, ಜಾವೇದ್ ಬಾಗವಾನ, ಬಲವಂತಗೌಡ ಪಾಟೀಲ, ಶಿಲ್ಪಾ ಬಾವಿಕಟ್ಟಿ ಮತ್ತವರ ಪತಿ ರಾಜು ಬಾವಿಕಟ್ಟಿ, ಭಾವನಾ ಪಾಟೀಲ ಮತ್ತವರ ಪತಿ ಸುನಿಲಗೌಡ ಪಾಟೀಲಹಾಗೂ ಬಿಜೆಪಿಯ ಬಸವರಾಜ ಹಿಟ್ಟಿನಮಠ, ಪ್ರಹ್ಲಾದ ಸಣ್ಣಕ್ಕಿ, ಚನ್ನಬಸು ಯರಗಟ್ಟಿ, ರಾಜು ಚಮಕೇರಿ, ರವಿ ಜವಳಗಿ ಮುಂತಾದವರನ್ನು ವಿಚಾರಣೆ ನಡೆಸಲಾಯಿತು.