ಹೆಚ್ಚುತ್ತಿರುವ ಕಳ್ಳತನ ಪ್ರಕರಣ ತಡೆಯಲು ವ್ಯಾಪಾರಸ್ಥರ ಮನವಿ
ಮಹಾಲಿಂಗಪುರ 23: ನಗರದಲ್ಲಿ ಕಳ್ಳತನ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ರಾತ್ರಿ 10ರಿಂದ ಅಂಗಡಿ-ಮುಂಗಟ್ಟುಗಳನ್ನು ಕಡ್ಡಾಯವಾಗಿ ಬಂದ್ ಮಾಡಬೇಕು. ತಪ್ಪಿದಲ್ಲಿ ದಂಡ ಹಾಗೂ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರ ಠಾಣಾಧಿಕಾರಿ ಜಿ.ಎಸ್. ಉಪ್ಪಾರ ಹೇಳಿದರು.
ನಗರದಲ್ಲಿ ಹೆಚ್ಚುತ್ತಿರುವ ಕಳ್ಳತನ ಹಾಗೂ ಅಪಘಾತ ಪ್ರಕರಣಗಳ ಬಗ್ಗೆ ಠಾಣಾಧಿಕಾರಿಗಳ ಗಮನ ಸೆಳೆಯಲು ನಗರದ ನಾಗರಿಕರು ಭೇಟಿಯಾದ ವೇಳೆ ಮಾತನಾಡಿದ ಅವರು, ಬೆಳೆಯುತ್ತಿರುವ ನಗರವಾಗಿರುವುದರಿಂದ ಸುರಕ್ಷೆ ನಮ್ಮ-ನಿಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣ ಠಾಣೆಗೆ ತಿಳಿಸಿ. ಪರಿವಾರ ಸಮೇತರಾಗಿ ಮನೆ ಬಿಟ್ಟು ಹೋಗುವಾಗ ಠಾಣೆಗೆ ಮಾಹಿತಿ ನೀಡಬೇಕು. ಇಲಾಖೆಯಿಂದ ಮನೆಗೆ ರಕ್ಷಣೆ ನೀಡಲಾಗುವುದು. ಈಗಾಗಲೇ ನಡೆದ ಕಳ್ಳತನ ಪ್ರಕರಣಗಳ ಮಾಹಿತಿ ತೆಗೆದುಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಮಟ್ಟ ಹಾಕಲಾಗುವುದು ಎಂದರು.
ಅಪಘಾತ ತಡೆಗೆ ಕ್ರಮ: ಪಟ್ಟಣದಲ್ಲಿ ಡಿಸೆಂಬರ್ ತಿಂಗಳಿಂದ ಜನವರಿವರೆಗೂ ಹೆಚ್ಚಿನ ಅಪಘಾತಗಳು ಸಂಭವಿಸಿವೆ. ಇವುಗಳ ಕಡಿಮೆ ಮಾಡಲಿಕ್ಕೆ ತಳ್ಳುವಗಾಡಿ ಅಥವಾ ಇನ್ನಿತರ ಅಂಗಡಿಗಳನ್ನು ವಾಹನ ಸಂಚರಿಸುವ ರಸ್ತೆಗಳ ಮೇಲೆ ಹಚ್ಚಲಿಕ್ಕೆ ಅವಕಾಶ ನೀಡಲಾಗುವುದಿಲ್ಲ. ಸುಗಮ ಸಂಚಾರಕ್ಕಾಗಿ ಬಸವೇಶ್ವರ ವೃತ್ತದಿಂದ ಚೆನ್ನಮ್ಮ ವೃತ್ತಗಳ ಹೆದ್ದಾರಿಯ ಇಕ್ಕೆಲೆಗಳಲ್ಲಿ ಆಟೋರಿಕ್ಷಾ ಸಹಿತವಾಗಿ ಎಲ್ಲ ವಾಹನಗಳ ನಿಲುಗಡೆ ನಿಬರ್ಂಧಿಸಲಾಗಿದೆ. ತಾವುಗಳು ಕೂಡ ಸುರಕ್ಷಿತ ಸ್ಥಳಗಳಲ್ಲಿ ಗಾಡಿಗಳನ್ನು ನಿಲ್ಲಿಸಬೇಕು ಇಲ್ಲದಿದ್ದರೆ ತಮ್ಮ ಮೇಲೆಯೂ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಎಂದರು.
ಹಣ್ಣಿನ ವ್ಯಾಪಾರಿ ಪ್ರೇಮಾ ಯಡ್ರಾವಿ ಹಾಗೂ ಇನ್ನಿತರರು ನಮ್ಮ ಬದುಕೇ ಅಂಗಡಿಗಳ ಮೇಲಿದೆ. ನಮಗೆ ಹಚ್ಚಲಿಕ್ಕೆ ಅವಕಾಶವನ್ನ ನೀಡಿರಿ ಸಾಹೇಬರೇ ಎಂದು ಪಿಎಸ್ಐ ಅವರನ್ನು ಕೋರಿದಾಗ, ಜೀವಕ್ಕಿಂತ ವ್ಯಾಪಾರ ಶ್ರೇಷ್ಠವಲ್ಲ. ತಾವುಗಳು ಸಾರ್ವಜನಿಕರಿಗೆ ಅಪಾಯ ರಹಿತವಾದ ಪ್ರದೇಶಗಳಲ್ಲಿ ವ್ಯಾಪಾರ ಮಾಡಬಹುದು ಇದಕ್ಕೆ ನಮ್ಮ ಅಭ್ಯಂತರವಿಲ್ಲ ತಾವು ಇದಕ್ಕೆ ತಪ್ಪಿದಲ್ಲಿ ದಂಡ ಹಾಗೂ ಕಾನೂನು ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಖಾರವಾಗಿ ನುಡಿದರು. ಮನವಿ ಸಲ್ಲಿಸಲು ಬಂದ ಹಣ್ಣಿನ ವ್ಯಾಪಾರಿಗಳು ದಾರಿಗೆ ಸುಂಕವಿಲ್ಲದಂತೆ ತೆರಳಿದರು.
ಈ ಸಂದರ್ಭದಲ್ಲಿ ನಾಗರಿಕರಾದ ಹನುಮಂತ ಜಮಾದಾರ, ಅರವಿಂದ ಮಾಲಬಸರಿ, ಬಸವರಾಜ್ ಪರೀಠ, ಮೀರಾ ತಟಗಾರ್, ಯಾಸಿನ್ ಸಿಂದಗಿ, ಖಾದಿರ್ ಕರೋಶಿ, ಅಬ್ದುಲ್ ಕಬಾಡಿ, ಹಣ್ಣಿನ ವ್ಯಾಪಾರಸ್ಥರಾದ ಅಲ್ಲಪ್ಪ ಕಾಲತಿಪ್ಪಿ, ಯಮನಪ್ಪ ಯಡ್ರಾವಿ, ಮೀನಾಕ್ಷಿ ಭಜಂತ್ರಿ, ಬೆಳ್ಳುಬ್ಬಿ ಇನ್ನಿತರರಿದ್ದರು.
ಠಾಣೆಯ ವಿಶೇಷ ಸೂಚನೆ :ಇ ಆರ್ ಎಸ್ ಎಸ್-112 ಹಾಗೂ ಠಾಣೆಯ 08350 270033 ಸಂಶಯ ಬಂದ ವ್ಯಕ್ತಿಗಳ ಬಗ್ಗೆ ಹಾಗೂ ಪ್ರಕರಣಗಳು ಜಾರಿಯಲ್ಲಿರುವಾಗ ಈ ನಂಬರ್ ಗಳಿಗೆ ತಪ್ಪದೇ ಮಾಹಿತಿ ನೀಡಿ ಕಾನೂನು ಬಾಹಿರ ಪ್ರಕರಣಗಳಿಗೆ ಕಡಿವಾಣ ಹಾಕಲು ಸಹಕರಿಸಿ.
ನಗರದಲ್ಲಿ ಹೆಚ್ಚುತ್ತಿರುವ ಕಳ್ಳತನ ಹಾಗೂ ಅಪಘಾತಗಳ ಕಡಿವಾಣಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಠಾಣೆಯ ಅಧಿಕಾರಿ ಜಿಎಸ್ ಉಪ್ಪಾರ್ ರವರಿಗೆ ಪಟ್ಟಣದ ನಾಗರಿಕರ ಪರವಾಗಿ ಧನ್ಯವಾದಗಳು.
ಶೇಖರ್ ಅಂಗಡಿ
ಪುರಸಭಾ ಸದಸ್ಯ ಹಾಗೂ ಅಧ್ಯಕ್ಷ ನಾಗರಿಕ ಹಿತರಕ್ಷಣಾ ಸಮಿತಿ ಮಹಾಲಿಂಗಪುರ.