ಮಹಲಿಂಗಪುರ

ತೆರೆಬಂಡಿ ಸ್ಪರ್ಧೆಯ ದಾಖಲೆಗಳ ರಾಜ ಇನ್ನಿಲ್ಲ- ಗಣ್ಯರ ಕಂಬನಿ, ಭಾವಪೂರ್ಣ ಶ್ರದ್ಧಾಂಜಲಿ.

ತೆರೆಬಂಡಿ ಸ್ಪರ್ಧೆಯ ದಾಖಲೆಗಳ ರಾಜ ಇನ್ನಿಲ್ಲ- ಗಣ್ಯರ ಕಂಬನಿ, ಭಾವಪೂರ್ಣ ಶ್ರದ್ಧಾಂಜಲಿ.

ಮಹಾಲಿಂಗಪುರ 27: ಕಳೆದ ಮೂರು ವರ್ಷಗಳಿಂದ ಪ್ರತಿಯೊಂದು ಊರಿನಲ್ಲಿ ನಡೆಯುವ ತೆರೆಬಂಡಿ, ಕಲ್ಲು ಜಗ್ಗುವ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆಯುತ್ತಾ ಉತ್ತರ ಕರ್ನಾಟಕದ ರೈತರ ಮನೆಮಾತಾಗಿದ್ದ ಮಹಾಲಿಂಗಪುರದ ರಾಜ ಗಂಟು ರೋಗಕ್ಕೆ ತುತ್ತಾಗಿ ಶನಿವಾರ ಕೊನೆಯುಸಿರೆಳೆದಿದ್ದನ್ನು ಜನರಿಂದ ಅರಗಿಸಿಕೊಳ್ಳಲಾಗುತ್ತಿಲ್ಲ. 

 ಪಟ್ಟಣದ ಕಾಂಗ್ರೆಸ್ ಮುಖಂಡ, ಪ್ರಗತಿಪರ ರೈತ ಯಲ್ಲನಗೌಡ ಪಾಟೀಲ, ಕೃಷ್ಣಗೌಡ ಪಾಟೀಲ ಸಹೋದರರ ತೆರೆಬಂಡಿ ಸ್ಪರ್ಧೆಯ ಎತ್ತು ಗಂಟುರೋಗಕ್ಕೆ ತುತ್ತಾಗಿ ಶನಿವಾರ ಮಧ್ಯಾಹ್ನ ಅಕಾಲಿಕವಾಗಿ ಅಸುನೀಗಿತು. 

ಕಳೆದ 3-4 ದಶಕಗಳಿಂದ ಜಾನುವಾರು ಪ್ರಿಯರು, ರೈತರಾದ ಯಲ್ಲನಗೌಡ ಪಾಟೀಲ ಅವರು ಮಹಾಲಿಂಗಪುರ ಬಸವೇಶ್ವರ ಜಾತ್ರಾ ಕಮಿಟಿ ಅಧ್ಯಕ್ಷರಾಗಿ ರೈತರ ಗ್ರಾಮೀಣ ಕ್ರೀಡೆಗಳಾದ ತೆರೆಬಂಡಿ, ಕಲ್ಲು ಎಳೆಯುವದು, ಗಳೆ ಹೊಡೆಯುವ ರಾಜ್ಯಮಟ್ಟದ ಸ್ಪರ್ಧೆಗಳನ್ನು ಸಂಘಟಿಸಿದವರು. ಸ್ವತಹ: ಸ್ಪರ್ಧೆಗಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ಸಾಕಿ ಸ್ಪರ್ಧೆಯಲ್ಲಿ ಭಾಗವಹಿಸುವದು ಇವರ ಪ್ರಮುಖ ಹವ್ಯಾಸವಾಗಿದೆ. ಅದರಂತೆ ಕಳೆದ ಮೂರು ವರ್ಷಗಳ ಹಿಂದೆ 8.1 ಲಕ್ಷ ಕೊಟ್ಟು ದಾಸನಾಳದ ರೈತರೊಬ್ಬರಿಂದ ಈ ಎತ್ತನ್ನು ಖರೀದಿಸಿದ್ದರು. 

 ಕಳೆದ ಮೂರು ವರ್ಷಗಳಲ್ಲಿ ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲೆಯ ವಿವಿಧ ಊರುಗಳಲ್ಲಿ ಜರುಗಿದ 50 ಕ್ಕೂ ಅಧಿಕ ತೆರೆಬಂಡಿ, ಕಲ್ಲು ಎಳೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿಯೊಂದು ಸ್ಪರ್ಧೆಯಲ್ಲಿ ಪ್ರಥಮ ಅಥವಾ ದ್ವಿತೀಯ ಬಹುಮಾನ ಪಡೆಯುತ್ತಿದ್ದ 20 ಕ್ಕೂ ಅಧಿಕ ಪ್ರಥಮ, 25 ಕ್ಕೂ ಅಧಿಕ ದ್ವಿತೀಯ ಬಹುಮಾನ ಗಳಿಸಿದ್ದು ಈ ದಾಖಲೆಯಾಗಿದೆ. 

 ಕಳೆದ ನಾಲ್ಕು ದಿನಗಳ ಹಿಂದೆ ಗಂಟುರೋಗಕ್ಕೆ ತುತ್ತಾದಾಗ ಸಾಕಷ್ಟು ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮಧ್ಯಾಹ್ನ ಅಸುನೀಗಿತು. ಅಕಾಲಿಕವಾಗಿ ಅಗಲಿದ ದಾಖಲೆಯ ವೀರನಿಗೆ ರೈತರು, ಗಣ್ಯರು ಹೂವಿನಹಾರ ಹಾಕಿ ಕಂಬನಿ ಮಿಡಿದರು. 

ಅವನೇ ಗೆದ್ದ ಡಾಲುಗಳು, ಬೆಳ್ಳಿಗದೆಯೊಂದಿಗೆ ತೆರೆದ ಟ್ರಾಕ್ಟರ್‌ನಲ್ಲಿ ಕರಡಿಮೇಳ, ಹಲಗೆವಾದನದೊಂದಿಗೆ ಪಟ್ಟಣದ ತುಂಬಾ ಮೆರವಣಿಗೆ ನಡೆಸಿ ಅಂತ್ಯಕ್ರಿಯೆ ನಡೆಸಲಾಯಿತು.  

ಮೆರವಣಿಗೆ ಮತ್ತು ಅಂತ್ಯಕ್ರಿಯೆಯಲ್ಲಿ ನೂರಾರು ರೈತರು, ಮುಖಂಡರು ಭಾಗವಹಿಸಿ ಕಂಬನಿ ಮಾಡಿದರು, ಮಹಿಳೆಯರು ಆರತಿ ಮಾಡಿ, ನಮಸ್ಕರಿಸಿ ಭಾವಪೂರ್ಣ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು. 

ಎಂಟು ಲಕ್ಷಕ್ಕೆ ಖರೀದಿಸಿದ ಈ ಎತ್ತು ಕಳೆದ ಮೂರು ವರ್ಷಗಳಲ್ಲಿ 50 ಕ್ಕೂ ಅಧಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದುಕೊಂಡು ನಮ್ಮ ಮನೆತನಕ್ಕೆ ಗೌರವ ತಂದಿದ್ದ, ಇಂದು ಅಕಾಲಿಕವಾಗಿ ಅಗಲಿದ್ದು ಬಹಳ ಬೇಸರ ಮತ್ತು ದು:ಖವಾಗುತ್ತಿದೆ. ನಾಲ್ಕು ದಿನಗಳ ಕಾಲ ಚಿಕಿತ್ಸೆ ಕೊಡಿಸಿದರೂ ಬದುಕಲಿಲ್ಲ. ತೆರೆಬಂಡಿ ಸ್ಪರ್ಧೆಯಲ್ಲಿ ದಾಖಲೆ ನಿರ್ಮಿಸಿದ್ದ ಇಂತಹ ಅಪರೂಪದ ಎತ್ತು ಮತ್ತೆ ಸಿಗುವದು ಕಷ್ಟ. 

 -ಯಲ್ಲನಗೌಡ ಪಾಟೀಲ, ಮತ್ತು ಕೃಷ್ಣಗೌಡ ಪಾಟೀಲ.

ಎತ್ತಿನ ಮಾಲೀಕರು ಮಹಾಲಿಂಗಪುರ 


ಸುದ್ದಿ ಓದಿ