ಹಿಜಾಬ್ ಪ್ರಕ್ರಿಯೆ ಹೆಣ್ಣುಮಕ್ಕಳಿಗೆ ಒಂದು ರಕ್ಷಣಾ ಕವಚ
ಮಹಾಲಿಂಗಪುರ 08: ವಿವಿಧ ಜಾತಿ, ಜನಾಂಗ ಮತ್ತು ಸಮುದಾಯಗಳ ಸಂಪ್ರದಾಯ, ಭಾಷೆ, ಉಡುಗೆ-ತೊಡುಗೆ, ಆಚಾರ-ವಿಚಾರಗಳ ಅನುಗುಣವಾಗಿ ದೇಶದ ಸಂವಿಧಾನ ರಚಣೆಗೊಂಡಿದ್ದು ಹಿಜಾಬ್ ನಮ್ಮ ಸಮುದಾಯದ ಧಾರ್ಮಿಕ ಹಕ್ಕಾಗಿದೆ ಎಂದು ಪಟ್ಟಣದ ದಾರುಲ್-ಉಲೂಮ್ ಮಹಮ್ಮದಿಯ ಎಜುಕೇಶನ್ ಟ್ರಸ್ಟ್ ಶಾಲೆಯ ಪ್ರಾಚಾರ್ಯ ಮೌಲಾನಾ ಜಕ್ರಿಯಾಸಹಾಬ್ ಅನ್ಸಾರಿ ಹೇಳಿದರು.
ಸೋಮವಾರ ಮಧ್ಯಾಹ್ನ ಮುಸ್ಲಿಂ ಸಮಾಜದ ವಿವಿಧ ಸಂಘಟನೆಗಳು ಕರೆ ನೀಡಿದ್ದ ' ಹಿಜಾಬ್ 'ವಿಷಯ ದಡಿಯಲ್ಲಿ ರಾಜ್ಯದ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿರುವುದನ್ನು ಮತ್ತು ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಧೋರಣೆಯನ್ನೂ ಖಂಡಿಸಿ ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿಯವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಅನಾದಿಕಾಲದಿಂದಲೂ ಬಂದಿರುವ ಹಿಜಾಬ್ ಪ್ರಕ್ರಿಯೆ ಹೆಣ್ಣುಮಕ್ಕಳಿಗೆ ಒಂದು ರಕ್ಷಣಾ ಕವಚವಾಗಿದೆ ಎಂದಿಲ್ಲದ ವಿವಾದ ಈಗೇಕೆ ತಲೆದೋರುತ್ತಿದೆ, ವಿನಾಕರಣ ರಾಜಕಾರಣಿಗಳು ವಿವಾದ ಸೃಷ್ಟಿಸಿ ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆ. ಇದಕ್ಕೆ ನಾವು ಆಸ್ಪದ ಕೊಡುವುದಿಲ್ಲ. ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸರ್ವ ಶ್ರೇಷ್ಠ ಸಂವಿಧಾನದಡಿಯಲ್ಲಿ ಕಾನೂನು ಹೋರಾಟ ಮಾಡುತ್ತೇವೆ ಎಂದರು.
ಸ್ಥಳೀಯ ಜಾಮೀಯಾ ಮಸ್ಜಿದ್ ಮೌಲಾನಾ. ಮಾಹಿರುಲ್ ಖಾದ್ರಿ ಮತ್ತು ಪ್ರತಿಭಟನೆಯ ನೇತೃತ್ವ ವಹಿಸಿದ ಸೈಯದ್ ನದಾಫ್ ಇದೇ ವಿಷಯದ ಮೇಲೆ ಮಾತನಾಡಿ ಸಮಾಜದ ಶಾಂತತೆ ಕದಡುವ ಪ್ರಯತ್ನವಾಗಿದೆ. ಇಂತಹ ಶಕ್ತಿಗಳನ್ನು ಸರ್ಕಾರ ಮಟ್ಟಹಾಕಬೇಕು. ಹಿಜಾಬ್ ಹೆಸರಿನಲ್ಲಿ ಮುಸ್ಲಿಮ್ ಸಮಾಜಕ್ಕೆ (ವಿದ್ಯಾರ್ಥಿನಿಯರಿಗೆ) ಆಗುತ್ತಿರುವ ಅನ್ಯಾಯಕ್ಕೆ ನ್ಯಾಯ ಸಿಗಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರು ಹಾಗೂ ಪುರುಷರು ಸೇರಿ ಮಹಿಳೆಯರ ಸ್ವಾಭಿಮಾನದ ಪ್ರತೀಕವಾದ ವೀರ ರಾಣಿ ಚೆನ್ನಮ್ಮ ವೃತ್ತದಿಂದ ಪುರಸಭೆಯ ವರೆಗೆ ಶಾಂತ ರೀತಿಯ ಪಾದಯಾತ್ರೆ ಪ್ರತಿಭಟನೆ ಮಾಡಲು ಅಡ್ಡಿ ಪಡಿಸಿದ್ದಕ್ಕೆ ಪೊಲೀಸರ ಕ್ರಮಕ್ಕೆ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಹಿಜಾಬ್ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಪ್ರತಿಭಟನಾಕಾರರು ಒಕ್ಕೊರಲಿನಿಂದ ಘೋಷಣೆ ಕೂಗಿ ನ್ಯಾಯಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.