ಹೋರಾಟದ ಸಂದರ್ಭವೇ ಬರಬಾರದಿತ್ತು: ಸಿದ್ಧರಾಮ ಶ್ರೀ
ಮಹಾಲಿಂಗಪುರ 18: ಇಡೀ ರಾಜ್ಯದಲ್ಲಿಯೇ ಸುಪ್ರಸಿದ್ಧ ಮಾರುಕಟ್ಟೆ ಮತ್ತು ಬೆಲ್ಲಕ್ಕೆ ಹೆಸರುವಾಸಿಯಾಗಿರುವ ಮಹಾಲಿಂಗಪುರ ತಾಲೂಕು ಘೋಷಣೆಗೆ ಹೋರಾಟ ಮಾಡುವ ಸಂದರ್ಭವೇ ಬರಬಾರದಿತ್ತು, ರಬಕವಿ-ಬನಹಟ್ಟಿ ಮತ್ತು ತೇರದಾಳ ತಾಲೂಕು ಘೋಷಣೆಗಿಂತ ಪೂರ್ವದಲ್ಲಿಯೇ ಮಹಾಲಿಂಗಪುರ ತಾಲೂಕು ಘೋಷಣೆ ಆಗಬೇಕಾಗಿತ್ತು ಎಂದು ರನ್ನಬೆಳಗಲಿಯ ಸಿದ್ಧಾರೂಢ ಮಠದ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಹೇಳಿದರು.
' ಜೀವ ಬಿಟ್ಟೆವು ತಾಲೂಕು ಬಿಡೆವು ' ಎಂಬ ನಿಲುವಿನೊಂದಿಗೆ ಆರಂಭವಾಗಿರುವ ಮಹಾಲಿಂಗಪುರ ತಾಲೂಕು ಹೋರಾಟ ಅನಿರ್ಧಿಷ್ಟಾವಧಿ ಮುಷ್ಕರ ಇಂದು ಮಹಾಲಿಂಗಪುರದ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ 5ನೇ ದಿನದಲ್ಲಿ ಪಾದಾರೆ್ಣ ಮಾಡಿರುವ ಮುಷ್ಕರದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ತಾಲೂಕು ಘೋಷಣೆ ಆಗುವುದರಿಂದ ನಿತ್ಯವೂ ಮುಷ್ಕರದಲ್ಲಿ ಕುಳಿತು ಹೋರಾಟ ಮಾಡುವವರಿಗಿಂತ ವ್ಯಾಪಾರಸ್ಥರು, ರೈತರು, ಕಾರ್ಮಿಕರಿಗೆ 10 ಪಟ್ಟು ಹೆಚ್ಚು ಲಾಭವಾಗುತ್ತದೆ ಹಾಗಾಗಿ ಹೋರಾಟಗಾರರಿಗೆ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಹಣ್ಣು, ಉಪಹಾರ, ನೀರು ಸೇರಿದಂತೆ ಕೈಲಾದ ಮಟ್ಟಿಗೆ ಸಹಾಯ ಸಹಕಾರ ನೀಡಿ ಹೋರಾಟದಲ್ಲಿ ಭಾಗಿತ್ವವನ್ನು ಪಡೆಯಬೇಕು ಎಂದರು.
ಮುಧೋಳ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರೆಪ್ಪ ಸಾಂಗ್ಲಿಕರ ಮಾತನಾಡಿ, ಸೇತುವೆ ನಿರ್ಮಾಣದಲ್ಲಿ ಅಳಿಲು ಮಾಡಿದ ಸೇವೆಯಂತೆ ಪ್ರತಿಯೊಬ್ಬರೂ ತಾಲೂಕು ಹೋರಾಟದಲ್ಲಿ ತಮ್ಮ ಕೈಲಾದ ಸಹಕಾರ ನೀಡಿ ಭಾಗವಹಿಸಬೇಕು. 30 ವರ್ಷಗಳ ಬೇಡಿಕೆಯಾದ ತಾಲೂಕು ಹೋರಾಟ ಈಗ ಸಾಮೋಪಾಯದಿಂದ ಸಾಗಿದ್ದು, ಬರುವ ದಿನಗಳಲ್ಲಿ ಸರ್ಕಾರ ಸ್ಪಂದಿಸದಿದ್ದರೆ ಉಗ್ರರೂಪ ತಾಳುತ್ತದೆ ಮತ್ತು ಯಾವುದೇ ಕಾರಣಕ್ಕೂ ತಾಲೂಕು ಘೋಷಣೆಯಾಗುವವರೆಗೂ ಮುಷ್ಕರನಿರತ ಸ್ಥಳದ ಶಾಮಿಯಾನ ತೆಗೆಯುವ ಪ್ರಶ್ನೆಯೇ ಇಲ್ಲ. ತಾಲೂಕು ಘೋಷಣೆಯಾದ ನಂತರವೇ ಈ ವೇದಿಕೆಯನ್ನು ತೆರವುಗೊಳಿಸಲಾಗುವುದು ಅದುವರೆವಿಗೂ ಹೋರಾಟ ಮುಂದುವರೆಯುತ್ತದೆ. ರಾಜ್ಯದ ಪ್ರತಿಷ್ಠಿತ ಮಹಾಲಿಂಗಪುರ ಎಪಿಎಂಸಿ ಅಧ್ಯಕ್ಷರನ್ನಾಗಿ ಮಾಡಿದ ಪಟ್ಟಣದ ಜನರ ಋಣ ನನ್ನ ಮೇಲಿದ್ದು, ಅದನ್ನು ತೀರಿಸುವ ಕಾಲ ಈಗ ಕೂಡಿ ಬಂದಿರುವುದು ನನ್ನ ಸೌಭಾಗ್ಯ. ಆದ್ದರಿಂದ ನನ್ನ ನಿರಂತರ ಹೋರಾಟದ ಮೂಲಕವಾಗಿ ಅದನ್ನು ತೀರಿಸುತ್ತೇನೆ ಎಂದು ಭಾವುಕರಾಗಿ ನುಡಿದರು.
ರನ್ನಬೆಳಗಲಿ ಪಪಂ ಅಧ್ಯಕ್ಷ ಮಾಜಿ ಅಧ್ಯಕ್ಷ ಸಿದ್ದುಗೌಡ ಪಾಟೀಲ, ಸಂಗಪ್ಪ ಹಲ್ಲಿ, ಚನ್ನಬಸು ಹುರಕಡ್ಲಿ ಮಾತನಾಡಿ ತಾಲೂಕು ಘೋಷಣೆಗೆ ಆಗ್ರಹಿಸಿದರು.
ಮಹಿಳಾ ಸಂಘಟನೆಗಳ ಸದಸ್ಯರಾದ ಸುಧಾ ಮಠಪತಿ, ಅರುಣಾ ಮೊಕಾಶಿ, ಸುಜಾತ ಸಬಕಾಳೆ, ಮಹಾನಂದ ಗುಣಾರಿ, ಮಂಜುಳಾ ಘಾಟಗೆ, ರಾಜೇಶ್ವರಿ ಕತಊಡಿ, ಜ್ಯೋತಿ ಕಡಕೋಳ, ಗೌರಿ ಮಂಜ, ಸುಜಾತ ಬುರಾನಪುರ, ಮಲ್ಲವ್ವ ನಿಂಗನೂರ, ಆಶಾ ಮುದಕವಿ, ಸುನಂದಾ ನಾಮದೇವ, ಸುಧಾ ಹಾಸೀಲಕರ, ಭಾರತಿ ಹುಣಶಾಳ, ಗೀತಾ ತೇಲಿ, ಸಕ್ಕೂಬಾಯಿ ಬಳೋಲ, ಶಾಂತವ್ವ ಬಡಿಗೇರ, ಬಡಿಮಾ ಪೆಂಡಾರಿ, ಹಸೀನಾ ಜಮಾದಾರ, ನೇಕಾರ ಮುಖಂಡ ಮನೋಹರ ಶಿರೋಳ,ಅನಿಲ ಮಮದಾಪುರ,ಮಹಾದೇವ ಮೇಟಿ, ವೀರೇಶ ಆಸಂಗಿ, ಹನುಮಂತ ಜಮಾದಾರ, ಚೇತನ ಹುಣಶಾಳ ಇತರರು ಇದ್ದರು.