ಜನಸಾಮಾನ್ಯರು- ಬಡವರು, ನ್ಯಾಯಧಾನದಿಂದ ವಂಚಿತರಾಗಬಾರದು- ತಿಮ್ಮೇನಹಳ್ಳಿ
ರಾಣೆಬೆನ್ನೂರು 18: ಇಂದಿನ ಸಮಾಜದಲ್ಲಿ ಬದುಕಿ ಬಾಳುವ ಕಟ್ಟ ಕಡೆಯ ಪ್ರತಿಯೊಬ್ಬ ಮನುಷ್ಯನಿಗೂ ಕಾನೂನಾತ್ಮಕ ಸಮಸ್ಯೆಗಳನ್ನು ಎದುರಿಸಬೇಕಾದರೆ ಕನಿಷ್ಠ ಕಾನೂನಿನ ಜ್ಞಾನ ಅಗತ್ಯವಿದೆ ಎಂದು ನ್ಯಾಯವಾದಿ, ವಕೀಲರ ಸಂಘದ ಉಪಾಧ್ಯಕ್ಷ ಹೆಚ್.ಹೆಚ್. ತಿಮ್ಮೇನಹಳ್ಳಿ ಹೇಳಿದರು.
ಅವರು ಬುಧವಾರ ತಾಲೂಕಿನ ಹೊನ್ನತ್ತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ, ತಾಲೂಕ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ, ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಜನಸಾಮಾನ್ಯರ ನೆರವಿಗೆ ತಾಲೂಕು ಕಾನೂನು ಸೇವಾ ಸಮಿತಿ ಸದಾವಕಾಲವು ಸಹಾಯ ಹಸ್ತ ನೀಡುತ್ತದೆ. ಬಡತನ ರೇಖೆಗಿಂತ ಕೆಳಗಿರುವವರು ಕಾನೂನಿಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಗಳಿರಲಿ, ಸಮಿತಿಯು ಉಚಿತ ಸಲಹೆ, ಮಾರ್ಗದರ್ಶನ ಜೊತೆಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡಲಿದೆ. ಸಮಸ್ಯೆ ಇದ್ದವರು ನ್ಯಾಯದಿಂದ ವಂಚಿತರಾದವರು ಸೇವಾ ಸಮಿತಿಯ ನ್ಯಾಯವಾದಿಗಳೊಂದಿಗೆ ಚರ್ಚಿಸಿ, ಸೂಕ್ತ ಮಾಹಿತಿ ನೀಡಿ ಉಚಿತ ಸೇವೆಯ ಮೂಲಕ ಸಮಾನತೆ ಸಾಧಿಸಬೇಕು ಎಂದರು.