ಕಂಪ್ಲಿ

ಶರಣರ ಸಮಾನತೆಯ ತತ್ವಗಳು ಇಂದಿಗೂ ಪ್ರಸ್ತುತ: ಶಿಕ್ಷಕಿ ಜ್ಯೋತಿ ಇಟಗಿ

ಶರಣರ ಸಮಾನತೆಯ ತತ್ವಗಳು ಇಂದಿಗೂ ಪ್ರಸ್ತುತ: ಶಿಕ್ಷಕಿ ಜ್ಯೋತಿ ಇಟಗಿ

ಲೋಕದರ್ಶನ ವರದಿ 

ಕಂಪ್ಲಿ, 28: ಇಲ್ಲಿನ ಮಡಿವಾಳ ಮಾಚಿದೇವ ಸಮುದಾಯ ಭವನದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ 192ನೇ ಮಹಾಮನೆ ಕಾರ್ಯಕ್ರಮ ನಡೆಯಿತು.  ಕಾರ್ಯಕ್ರಮದಲ್ಲಿ 4ನೇ ವಾರ್ಡ್‌ ಸಹಿಪ್ರಾ ಶಾಲೆಯ ಶಿಕ್ಷಕಿ ಜ್ಯೋತಿ ಇಟಗಿ ಅವರು ‘ಶರಣರ ಸಮಾನತೆ’ ಕುರಿತು ಉಪನ್ಯಾಸ ನೀಡಿ, ಪ್ರಪಂಚದ ಯಾವುದೇ ಧರ್ಮವೂ ಕೊಡಲಾಗದ ಲಿಂಗ ಸಮಾನತೆಯ ಸಂದೇಶವನ್ನು 12ನೇ ಶತಮಾನದಲ್ಲಿಯೇ ಶಿವಶರಣರು ನೀಡಿದ್ದಾರೆ ಎಂದು ಹೇಳಿದರು.  

ಶಿವಶರಣರ ವಚನ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ನೀಡಿದ ಶ್ರೇಷ್ಠ ಕೊಡುಗೆಯಾಗಿದೆ. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳು ಶರಣರ ಚಿಂತನೆಯ ಮೂಲ ಅಂಶಗಳಾಗಿವೆ. ಇವುಗಳನ್ನು ಫ್ರಾನ್ಸ್ನ ಕೊಡುಗೆ ಎಂದು ಬಿಂಬಿಸುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.  

ಪರಿಷತ್ ತಾಲೂಕು ಅಧ್ಯಕ್ಷ ಜಿ. ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಚನ ಸಾಹಿತ್ಯವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಫ.ಗು. ಹಳಕಟ್ಟಿ ಅವರ ಕೊಡುಗೆ ಮಹತ್ವದ್ದಾಗಿದೆ ಎಂದರು.  

ಶಿಕ್ಷಕಿ ಗುರುಬಸಮ್ಮ ಚಂದ್ರಯ್ಯ ಸೋಪ್ಪಿಮಠ ಮಾತನಾಡಿ, ವಚನಗಳು ಪ್ರಾದೇಶಿಕ ಭಾಷೆಯಲ್ಲಿದ್ದರೂ ಅವುಗಳಲ್ಲಿನ ವಿಚಾರಧಾರೆ ವಿಶ್ವಮಾನ್ಯವಾಗಿದೆ. ವಿದೇಶಿ ಚಿಂತನೆಗಳ ಪ್ರಭಾವವನ್ನು ಶಿವಶರಣರು ತಮ್ಮ ವಚನಗಳ ಮೂಲಕ ಪ್ರತಿಪಾದಿಸಿದ್ದರು ಎಂದು ಹೇಳಿದರು.  

ಅಕ್ಕನ ಬಳಗದ ಸಹ ಕಾರ್ಯದರ್ಶಿ ಬಿ.ಎಂ. ಪುಷ್ಪಾ ರುದ್ರಯ್ಯ ಮಾತನಾಡಿದರು.  ಮಡಿವಾಳ ಸಮುದಾಯದ ತಾಲೂಕು ಅಧ್ಯಕ್ಷ ಮಡಿವಾಳ ಹುಲುಗಪ್ಪ ಮಾತನಾಡಿ, ಮಕ್ಕಳಿಗೆ ಬಾಲ್ಯದಲ್ಲಿಯೇ ವಚನಗಳನ್ನು ಕಲಿಸಿ, ಅದರಲ್ಲಿನ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪೋಷಕರು ಪ್ರೋತ್ಸಾಹಿಸಬೇಕು ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪದಾಧಿಕಾರಿಗಳಾದ ಎಸ್‌.ಡಿ. ಬಸವರಾಜ, ಎಚ್‌. ನಾಗರಾಜ, ಅಶೋಕ್ ಕುಕನೂರು, ಎಲಿಗಾರ ವೆಂಕಟರೆಡ್ಡಿ, ಕೆ. ಚಂದ್ರಶೇಖರ್, ಬಡಿಗೇರ್ ಜಿಲಾನ್ಸಾಬ್, ಮರಿಶೆಟ್ಟು ಸುರೇಶ್, ಶಂಕರ​‍್ಪ, ವಿರೂಪಾಕ್ಷಿ, ಡಿ. ಬಸವರಾಜ, ಯು.ಎಂ. ವಿದ್ಯಾಶಂಕರ್, ಎಂ. ವಿರೂಪಾಕ್ಷಿ, ಅಯ್ಯೋದಿ ಹನುಮಂತ, ಎಂ. ರಾಜಾ, ಎಂ. ರಾಘವೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.  ಮಹಾಮನೆ ಕಾರ್ಯಕ್ರಮದಲ್ಲಿ ಸಹಿಪ್ರಾ ಶಾಲೆಯ ಶಿಕ್ಷಕಿ ಜ್ಯೋತಿ ಇಟಗಿ ಅವರನ್ನು ಶರಣ ಸಾಹಿತ್ಯ ಪರಿಷತ್ ವತಿಯಿಂದ ಗೌರವಿಸಲಾಯಿತು. 


ಸುದ್ದಿ ಓದಿ