ಬಳ್ಳಾರಿ

ತೋಟಗಾರಿಕೆ ನಿರ್ದೇಶಕರು ರೈತರ ತೋಟಗಳಿಗೆ ಭೇಟಿ ನೀಡಿ ಕೀಟ ರೋಗದ ನಿಯಂತ್ರಣಕ್ಕೆ ಸಲಹೆ

ತೋಟಗಾರಿಕೆ ನಿರ್ದೇಶಕರು ರೈತರ ತೋಟಗಳಿಗೆ ಭೇಟಿ ನೀಡಿ ಕೀಟ ರೋಗದ ನಿಯಂತ್ರಣಕ್ಕೆ ಸಲಹೆ

ಬಳ್ಳಾರಿ 10: ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದ ಗಂಗಾಧರ್, ಬೇವಿನಹಳ್ಳಿ ಪೊಂಪಣ್ಣ, ಶಂಕ್ರ​‍್ಪ, ವೀರನಗೌಡ, ರೈತ ಮುಖಂಡರಾದ ಕೃಷ್ಣ ಹಾಗೂ ಇತರೆ ರೈತರ ತೋಟಗಳಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಯೋಗೇಶ್ವರ್ ಹೆಚ್‌.ಕೆ ಅವರು ಮಂಗಳವಾರ ಭೇಟಿ ನೀಡಿ ಪರೀಶಿಲಿಸಿದರು.  

ರೈತರ ತೋಟಗಳನ್ನು ವೀಕ್ಷಿಸಿದ ಅವರು ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದ ಮೆಣಸಿನಕಾಯಿ ಬೆಳೆಯಲ್ಲಿ ತೀವ್ರತರವಾದ ಕೀಟ ಮತ್ತು ರೋಗಬಾಧೆ ಕಾಣುತ್ತಿದೆ. ಹಾಗಾಗಿ ರೈತ ಬಾಂಧವರು ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತವಾಗಿರುತ್ತದೆ ಎಂದು ಹೇಳಿ ಕೀಟ ಮತ್ತು ರೋಗದ ನಿಯಂತ್ರಣಕ್ಕಾಗಿ ಸೂಕ್ತ ಸಲಹೆ ಸೂಚನೆಗಳನ್ನ ನೀಡಿದರು. 

ಕೀಟಗಳ ನಿಯಂತ್ರಣಕ್ಕಾಗಿ ಮುಟುರು ರೋಗದ ನಿಯಂತ್ರಣಕ್ಕಾಗಿ ಡೈಫೆಂತಿಯುರಾನ್ 01 ಗ್ರಾಂ ಅಥವಾ ಸ್ಪೈನಿಟೊರಂ 0.6 ಮಿ.ಲೀ. ಅಥವಾ ಥೈಯೋಮಿಥೋಸಾಂ 0.5 ಗ್ರಾಂ ಅಥವಾ ಬೀಟಾ ಸೈಫ್ಲೂಥ್ರಿನ್‌+ಇಮಿಡಾಕ್ಲೋಪ್ರಿಡ್ 01 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಮಿಡ್ಜ್‌ ಕೀಟನ ನಿಯಂತ್ರಣಕ್ಕಾಗಿ ಕಾರ್ಬೋಸಲ್ಫಾನ್ 01 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು. ಯಾವುದೇ ಸಿಂಪರಣೆ ಮಾಡುವ ಸಂದರ್ಭದಲ್ಲಿ ಸ್ಟಿಕರ್‌ಗಳನ್ನು ಬೆರೆಸಿ ಸಿಂಪರಣೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.  

ರೋಗ ನಿಯಂತ್ರಣಕ್ಕಾಗಿ ರೋಗ ಪೀಡಿತ ಹಣ್ಣುಗಳನ್ನು ಕಿತ್ತು ದೂರವಿಡಬೇಕು. ಭೂಮಿಯಲ್ಲಿ ಹೆಚ್ಚು ತೇವಾಂಶ ಇರಕೂಡದು. ಮಚ್ಚೆ ರೋಗದ ನಿಯಂತ್ರಣಕ್ಕಾಗಿ ಪ್ರೊಪಿನೆಬ್ 2.5 ಗ್ರಾಂ ಅಥವಾ ಥೈಯೋಫಿನೇಟ್ ಮಿಥೈಲ್ 0.5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು ಎಂದು ಹೇಳಿದರು.  

ಬೂದುರೋಗ ನಿಯಂತ್ರಣಕ್ಕಾಗಿ ಟೆಬ್ಯುಕೋನಜೋಲ್ 01 ಮಿ.ಲೀ. ಅಥವಾ ಹೆಕ್ಸಾಕೋನಜೋಲ್ 01 ಮಿ.ಲೀ.  ಅಥವಾ ಡೈಫಿನಕೋನಜೋಲ್ 0.5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.  ಕೀಟ ಮತ್ತು ರೋಗದ ಬಾದೆಯು ಗಿಡಗಳ ಸಾಂದ್ರತೆ ಹೆಚ್ಚಾಗಿರುವುದರಿಂದ ಹಾಗೂ ಪ್ರತಿ ವರ್ಷವೂ ಅದೇ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯುವುದರಿಂದ ಹೆಚ್ಚಾಗಿರುವುದು ಕಂಡುಬಂದಿದ್ದು, ಪ್ರತಿ ಎಕರೆಗೆ 8000 ರಿಂದ 9000 ಗಿಡಗಳನ್ನು ನಾಟಿ ಮಾಡುವುದು ಮತ್ತು ಬೆಳೆ ಪರಿವರ್ತನೆ ಪದ್ಧತಿಯನ್ನು ಅನುಸರಿಸುವುದು ಸೂಕ್ತವಾಗಿರುತ್ತದೆ ಎಂದು ರೈತರಿಗೆ ಸಲಹೆ ನೀಡಿದರು.  

ಈ ಸಂದರ್ಭದಲ್ಲಿ ತೋಟಗಾರಿಕೆ ಉಪನಿರ್ದೇಶಕ ಶರಣಪ್ಪ ಬೋಗಿ, ಸಹಾಯಕ ತೋಟಗಾರಿಕೆ ನಿರ್ದೇಶಕ ಮಂಜುನಾಯ್ಕ, ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಪ್ರಸಾದ್, ರೈತ ಮುಖಂಡರು ಹಾಗೂ ಗ್ರಾಮದ ರೈತರು ಉಪಸ್ಥಿತರಿದ್ದರು. 


ಸುದ್ದಿ ಓದಿ