ಶಾಸಕರ "ಅನರ್ಹತೆ" ; ಸ್ಪೀಕರ್ ಹೊಂದಿರುವ "ಅಧಿಕಾರ" ಸಂಸತ್ತು ಮರು ಪರಿಶೀಲಿಸಬೇಕು ; ಸುಪ್ರೀಂ ಕೋರ್ಟ್
ನವದೆಹಲಿ, ಜ ೨೧ : ವಿಧಾನಸಭಾ ಸದಸ್ಯರ ಪಕ್ಷಾಂತರದ ಬಗ್ಗೆ ಸುಪ್ರೀಂ ಕೋರ್ಟ್ ಸಂಸತ್ತಿಗೆ ಮಹತ್ವದ ಸಲಹೆಗಳನ್ನು ಮಂಗಳವಾರ ನೀಡಿದೆ.
ಶಾಸಕರ ವಿರುದ್ದ ಸಲ್ಲಿಸಲಾಗುವ “ಅನರ್ಹತೆ” ಅರ್ಜಿಗಳ ಬಗ್ಗೆ ಸ್ಪೀಕರ್ ಪ್ರಸ್ತುತ ಹೊಂದಿರುವ ನಿರ್ಧಾರ ಕೈಗೊಳ್ಳುವ ಅಧಿಕಾರದ ಬಗ್ಗೆ ಸಂಸತ್ತು ಮರು ಪರಿಶೀಲಿಸಬೇಕು ಎಂದು ಸೂಚನೆ ನೀಡಿದೆ.
ಸ್ಪೀಕರ್ ಕೂಡ ಒಂದು ರಾಜಕೀಯ ಪಕ್ಷಕ್ಕೆ ಸೇರಿದ ವ್ಯಕ್ತಿಯಾದ ಕಾರಣ ತಮ್ಮ ಸಲಹೆಯನ್ನು ಸಂಸತ್ತು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಕೋರ್ಟ್ ಹೇಳಿದೆ.
ಶಾಸಕರ ವಿರುದ್ಧ ಅನರ್ಹತೆ ಅರ್ಜಿಗಳನ್ನು ಇತ್ಯರ್ಥಪಡಿಸಲು ಸ್ವಾಯತ್ತ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಸಹ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.
ಮಣಿಪುರ ಕಾಂಗ್ರೆಸ್ ಶಾಸಕ, ಅರಣ್ಯ ಸಚಿವ ಶ್ಯಾಂ ಕುಮಾರ್ ಅವರ ವಿಧಾನಸಭಾ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಕೋರಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಸೂಚನೆ ನೀಡಿದೆ.
ಶಾಸಕನ “ಅನರ್ಹತೆ” ಸಂಬಂಧ ಸಲ್ಲಿಕೆಯಾಗಿರುವ ಆರ್ಜಿಯ ಬಗ್ಗೆ ನಾಲ್ಕು ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಮಣಿಪುರ ಸ್ಪೀಕರ್ಗೆ ಸುಪ್ರೀಂ ಕೋರ್ಟ್ ಇದೇ ವೇಳೆ ತಾಕೀತುಮಾಡಿದೆ.
ಕಾಂಗ್ರೆಸ್ ನಿಂದ ಗೆದ್ದಿದ್ದ ಶ್ಯಾಂ ಕುಮಾರ್, ನಂತರ ಬಿಜೆಪಿಗೆ ಪಕ್ಷಾಂತರ ಗೊಂಡು, ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದನ್ನು ವಿರೋಧಿಸಿದ್ದ ಕಾಂಗ್ರೆಸ್, ಶಾಸಕ ಶ್ಯಾಂ ಕುಮಾರ್ ವಿರುದ್ಧ ಸ್ಪೀಕರ್ ಅವರಿಗೆ ಅನರ್ಹತೆ ಅರ್ಜಿ ಸಲ್ಲಿಸಿತ್ತು.
ಈ ಪೈಕಿ ನಾಲ್ಕು ವಾರಗಳಲ್ಲಿ ಮಣಿಪುರ ಸ್ಪೀಕರ್ ನಿರ್ಧಾರ ತೆಗೆದುಕೊಳ್ಳಬೇಕು, ಇಲ್ಲವಾದರೆ, ಕಾಂಗ್ರಸ್ ಶಾಸಕರು ಮತ್ತೆ ತಮ್ಮನ್ನು ಸಂಪರ್ಕಿಸಬಹುದು ಎಂದು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.
ಯಾವುದೂ ಒಂದು ಪಕ್ಷದಿಂದ ಚುನಾಯಿತರಾಗಿ ಸ್ಪೀಕರ್ ಸ್ಥಾನದಲ್ಲಿರುವವರು “ಶಾಸಕರ ಅನರ್ಹತೆ” ಆರ್ಜಿಗಳ ಮೇಲೆ ನಿರ್ಣಯ ಕೈಗೊಳ್ಳಬಹುದೆ? ಅಥವಾ ಇಲ್ಲವೇ? ಎಂಬುದನ್ನು ಸಂಸತ್ತು ಮರು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಸಂಸತ್ತನ್ನು ಕೋರಿದೆ.