ತೆರೆಬಂಡಿಗೆ ಕಂಬಳದ ಸ್ಥಾನ ಮಾನಕ್ಕೆ ಶ್ರಮಿಸುವೆ : ವೀಣಾ ಕಾಶಪ್ಪನವರ
ಮಹಾಲಿಂಗಪುರ 29: ರಾಜ್ಯಮಟ್ಟದ ತೆರೆಬಂಡಿ ಸ್ಪರ್ಧೆ ಆಯೋಜನೆಯ ಮೂಲಕ ಎತ್ತುಗಳಿಗೆ ಪ್ರಾಣಿಗಳಿಗೆ ಗೌರವ ಸಲ್ಲಿಸಿದ ಯಲ್ಲನಗೌಡ ಪಾಟೀಲರ ಪ್ರಾಣಿ ಪ್ರೀತಿ ಹಾಗೂ ಹೃದಯವಂತಿಕೆ ಅನುಕರಣನೀಯ ಎಂದು ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.
ಬಸವೇಶ್ವರ ಜಾತ್ರಾ ಕಮಿಟಿ ವತಿಯಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮಹಾಲಿಂಗಪುರ ತೆರೆಬಂಡಿ ಸ್ಪರ್ಧೆಯ ಸಮಾರೋಪದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಅವರು, ಮಾತು ಕಡಿಮೆ ಕೆಲಸ ಬಹಳ ಎಂಬ ಅಪರೂಪದ ವ್ಯಕ್ತಿ ಯಲ್ಲನಗೌಡರ ಕನಸಿನಂತೆ ಕಂಬಳದಂತೆ ಉತ್ತರ ಕರ್ನಾಟಕದ ತೆರೆಬಂಡಿಗೂ ಸ್ಥಾನ ಮಾನ ಒದಗಿಸಲು ಸರ್ಕಾರದ ಮೇಲೆ ಒತ್ತಡ ಮಾಡುವ ಭರವಸೆ ನೀಡಿದರು.
3 ದಿನ ಜರುಗಿದ ಸ್ಪರ್ಧೆಯಲ್ಲಿ ರಾಜ್ಯ ಮತ್ತು ಪರರಾಜ್ಯದಿಂದ ಒಟ್ಟು 84 ಜೋಡೆತ್ತುಗಳು ಭಾಗವಹಿಸಿ, ವಿಠ್ಠಲ ಕುನ್ನಾಳವರ ಜೋಡೆತ್ತು ಪ್ರಥಮ ರೂ. 1 ಲಕ್ಷ, ಅಕ್ಕಿಮರಡಿಯ ಕುಮಾರ ಬೋರಡ್ಡಿಯವರ ಜೋಡೆತ್ತು ದ್ವಿತೀಯ 75 ಸಾವಿರ, ಹಲಕಿ ಪೂಜಾರಿಯವರ ಜೋಡೆತ್ತು ತೃತೀಯ 50 ಸಾವಿರ ನಗದು ಬಹುಮಾನ ಸೇರಿದಂತೆ ಒಟ್ಟು 25 ನಗದು ಬಹುಮಾನ ನೀಡಲಾಯಿತು.
ಜಾತ್ರಾಕಮಿಟಿ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಕೃಷ್ಣಗೌಡ ಪಾಟೀಲ, ವಿಠ್ಠಲಗೌಡ, ನಾರಾಯಣಗೌಡ, ಶಿವಪ್ಪ ಗಿರೆಡ್ಡಿ, ಮಹಾಲಿಂಗ ಪಾಟೀಲ, ಶ್ರೀನಿವಾಸಗೌಡ ಇತರರಿದ್ದರು.ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿದರು.
ಬಾಕ್ಸ್ : ರೈತ ನಗುತ್ತಿದ್ದರೆ ಮಾತ್ರ ಜಗತ್ತು ನಗುತ್ತಿರುತ್ತದೆ, ಯಾವುದೇ ಫಲಾಪೇಕ್ಷೆ ಇಲ್ಲದೇ ಮಳೆ ಬಿಸಿಲೆನ್ನದೆ ಹಗಲಿರುಳುರು ಬೆವರು ಸುರಿಸಿ ದುಡಿದು ಜಗತ್ತಿಗೇ ಅನ್ನ ನೀಡುವ ರೈತ ಮತ್ತು ಆತನ ಜೊತೆ ದುಡಿಯುವ ಎತ್ತುಗಳಿಗೆ ಚೈತನ್ಯ ತುಂಬುವ ಯಲ್ಲನಗೌಡ ಪಾಟೀಲರ ಕಾರ್ಯ ಅವಿಸ್ಮರಣನೀಯ, ಅವರ ಇಂತಹ ಕಾರ್ಯಕ್ಕೆ ಸದಾ ತಮ್ಮ ಸಹಕಾರವಿರುತ್ತದೆ : ವೀಣಾ ಕಾಶಪ್ಪನವರ, ಜಿಪಂ ಮಾಜಿ ಅಧ್ಯಕ್ಷೆ.