ಮಹಲಿಂಗಪುರ

ಯಶಸ್ವಿ ಕಾರ್ಯಕ್ರಮದಡಿ ಸಾಂಘಿಕ ಶ್ರಮ ಅಡಗಿರುತ್ತದೆ : ಪಂಡಿತ್ ಪೂಜಾರ

ಯಶಸ್ವಿ ಕಾರ್ಯಕ್ರಮದಡಿ ಸಾಂಘಿಕ ಶ್ರಮ ಅಡಗಿರುತ್ತದೆ : ಪಂಡಿತ್ ಪೂಜಾರ

ಮಹಾಲಿಂಗಪುರ   06: ಸ್ಥಳೀಯ ವಾಸವಿ ಕಲ್ಯಾಣ ಮಂಟಪದಲ್ಲಿ 1987-88ನೇ ಸಾಲಿನ ಎಸ್ಸೆಸ್ಸೆಲ್ಸಿ ಸಹಪಾಠಿಗಳ ಎರಡನೇ ವರ್ಷದ ಸಂಭ್ರಮದ ಸ್ನೇಹ ಸಂಗಮ ಕಾರ್ಯಕ್ರಮವು  ಯಶಸ್ವಿಯಾಗಿ ಜರುಗಿತು. 

 ಮುಗಿದ ಕೈ ಬಾಗಿದ ತಲೆ ಎಲ್ಲಿ ಗೋಚರಿಸುತ್ತದೆಯೋ ಅಲ್ಲಿ ಯಶಸ್ಸು    ಹುಡುಕಿ ಬರುತ್ತದೆ ಎಂದು ಚಿಮ್ಮಡ ವಿರಕ್ತ ಮಠದ ಮನಿಪ್ರ ಪ್ರಭು ಸ್ವಾಮೀಜಿ ಹೇಳಿದರು.ಸೋಮವಾರ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯ ಜಯಂತಿ ಯಂದು  ವಾಸವಿ ಕಲ್ಯಾಣ ಮಂಟಪದಲ್ಲಿ 1987-88ನೇ ಸಾಲಿನ ಎಸ್ಸೆಸ್ಸೆಲ್ಸಿ ಸಹಪಾಠಿಗಳ ಎರಡನೇ ವರ್ಷದ ಸಂಭ್ರಮದ ಸ್ನೇಹ ಸಂಗಮದ ದಿವ್ಯ ಸಾನ್ನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು. 

ದಶಕಗಳ ಸಂಬಂಧವನ್ನು ಕಾಪಾಡಿಕೊಂಡು ಹೋಗಬೇಕು. ಏಕೆಂದರೆ ಬಾಲ್ಯದ ಸ್ನೇಹಿತರು ಬಂದು ಬಾಂಧವರಿಗಿಂತ ಶ್ರೇಷ್ಠರು. ಪ್ರತಿಯೊಬ್ಬರೂ ದುಷ್ಟ ಚಟಗಳಿಗೆ  ಬಲಿಯಾಗದೆ ಸಮಾಜ ಗುರುತಿಸುವ ಶ್ರೇಷ್ಠ ವ್ಯಕ್ತಿಗಳಾಗಬೇಕು. ತಾವೆಲ್ಲರೂ 35 ವರ್ಷಗಳ ಕಳೆದು ಹೋದ ಬಾಲ್ಯವನ್ನು ಮತ್ತೆ ನೆನಪಿಸುವ ಕಾರ್ಯಕ್ರಮ ಏರಿ​‍್ಡಸಿರುವುದು ನಿಜಕ್ಕೂ ಶ್ಲಾಘನೀಯ. ಹೀಗೆಯೇ ನಿಮ್ಮ ಗೆಳೆತನ ನೂರಾರು ಕಾಲದವರೆಗೆ ಸಾಗಿ ಬರಲಿ ಎಂದು ಶ್ರೀಗಳು ಸಹಪಾಠಿಗಳನ್ನು ಹಾರೈಸಿದರು. 

ಸಾನಿಧ್ಯ ವಹಿಸಿದ ಸಿದ್ಧಾರೂಢ ಮಠದ ಸಿದ್ಧರಾಮ ಶಿವಯೋಗಿಗಳು ಆಶಿರ್ವಚನ ನೀಡಿ, ಶಾಲಾ ಹಂತದ ಗೆಳೆತನದಲ್ಲಿ ಮೇಲು ಕೀಳು ಎಂಬ ಭಾವನೆಯೇ ಇರುವುದಿಲ್ಲ ಇದು ಪವಿತ್ರ ಸಂಬಂಧವಾಗಿದೆ. ಹಾಲಿನ ಜೊತೆ ನೀರು ಹೇಗೆ ಬೆರೆಯುತ್ತದೆಯೋ ಹಾಗೆಯೇ ಗೆಳೆತನವೂ ಸಹ ಅನ್ಯೋನ್ಯತೆಯಿಂದ ಕೂಡಿರಬೇಕು.ನಾವು ಮೊದಲು ಮಾನಸಿಕ ಒತ್ತಡದಿಂದ ಹೊರ ಬಂದು, ಪರಸ್ಪರ ನಕ್ಕು ನಲಿಯಬೇಕು ಇದುವೆ ಸಮಾಜಕ್ಕೆ ಮಾದರಿ. ಇದರಿಂದ ಮುಪ್ಪು ಕೂಡ ಬೇಗ ಆವರಿಸುವುದಿಲ್ಲವೆಂದು ಸಹಪಾಠಿಗಳಿಗೆ ತಿಳಿ ಹೇಳಿದರು.ಇತ್ತಿಚೆಗೆ ರಾಷ್ಟ್ರದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಸಪನಾ ಅನಿಗೋಳ ಅವರು ಸನ್ಮಾನ ಸ್ವೀಕರಿಸಿ ಆಯೋಜಕರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ,ನಾನು ಶಿಕ್ಷಕಿಯಾಗಿ ಹಿರಿಯ ಸಹಪಾಠಿಗಳಿಂದ ಸನ್ಮಾನ ಸ್ವೀಕರಿಸುತ್ತಿರುವುದು ನನ್ನ ಸೌಭಾಗ್ಯ. ಬಾಲ್ಯದ ಗೆಳತನದಲ್ಲಿ ಮೇಲು ಕೀಳು ಎಂಬ ಭೇದ ಇರದೆ ನಾವೆಲ್ಲರೂ ಸಮಾನರು ಎಂಬ ಭಾವನೆ ಇರುತ್ತದೆ.  

ಇದೆ ಜೀವನದುದ್ದಕ್ಕೂ ಮುಂದುವರಿದಲ್ಲಿ ನಮ್ಮ ಗೆಳೆತನಕ್ಕೊಂದು ಅರ್ಥವಿರುತ್ತದೆ. ಮೂರು ದಶಕಗಳ ಹಿಂದೆ ಅಗಲಿದ ಸ್ನೇಹಿತರು ಸ್ನೇಹ ಸಂಗಮ ಕಾರ್ಯಕ್ರಮದ ವೇದಿಕೆ ಅಡಿ ಸೇರುತ್ತಿರುವುದು ಸಂತೋಷದಾಯಕ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಂಡಿತ ಪೂಜಾರ, ಯಶಸ್ವಿ ಕಾರ್ಯಕ್ರಮದಡಿ ಸಾಂಘಿಕ ಶ್ರಮ ಅಡಗಿರುತ್ತದೆ ಎಂದು ಸಹಪಾಠಿಗಳ ಸಹಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.ಹಿರಿಯ ಪತ್ರಕರ್ತರಾದ ಜಯರಾಂ ಶೆಟ್ಟಿ ಮಾತನಾಡಿ ಮಹಾತ್ಮ ಗಾಂಧಿಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಜಿ ಜಯಂತಿ ಅಂಗವಾಗಿ ಅವರ ತ್ಯಾಗ ಕೊಂಡಾಡಿದರು. ಹಳೆಯ  ಗೆಳೆಯರು ಮತ್ತೆ ಮತ್ತೆ ಸೇರಿ ಕಾರ್ಯಕ್ರಮ ಮಾಡುವುದರಿಂದ ಸ್ನೇಹ  ಗಾಢವಾಗುತ್ತದೆ ಮತ್ತು ತಮ್ಮಲ್ಲೆನಾದರೂ ಕಾರ್ಯಕ್ರಮ ಹಣ ಉಳಿದರೆ ಸಮೀಪದ ಅಂದ, ಬುದ್ಧಿಮಾಂದ್ಯ ಮತ್ತು ಅನಾಥ ಆಶ್ರಮಗಳಿಗೆ ನೀಡಿ ಪುಣ್ಯ ಕಟ್ಟಿಕ್ಕೊಳ್ಳಬೇಕು ಎಂದರು.ಮೀರಾ ತಟಗಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಸಪ್ತಸ್ವರ ಮೆಲೋಡೀಸ್ ಅಡಿಯಲ್ಲಿ ಖ್ಯಾತ ಕಲಾವಿದರು ಸಂಗೀತ ಸುಧೆ ಹರಿಸಿದರೆ, ಮಧ್ಯಾಹ್ನದ ಭೂರಿ ಭೋಜನ ಸವಿದು ಸಹಪಾಠಿಗಳೆಲ್ಲ ರಾಗ ತಾಳಕ್ಕೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಅದರಲ್ಲಿ ಮಿಮಿಕ್ರಿ ಕಿಂಗ್ ರಾಜು ಗೆದ್ದೆಪ್ಪನ್ನವರ, ಶಂಕರ ಕೋಳಿಗುಡ್ಡ ವೇದಿಕೆ ಮೇಲೆ ತಮ್ಮ ಕಲಾ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.ಸಂಜೆ ಆವರಿಸುತ್ತಲೆ ಒಲ್ಲದ ಮನಸ್ಸಿಂದ ಮನೆ ಕಡೆ ಹೆಜ್ಜೆ ಹಾಕಿದರು. ಶಿಕ್ಷಕಿಯರಾದ ದಿಲಶಾದ್ ನದಾಫ ನಿರೂಪಿಸಿ, ಸರಸ್ವತಿ ಚನಪನ್ನವರ ಪುಷ್ಪಾರ್ಚನೆ ಹಾಗೂ ಪದ್ಮಾವತಿ ಜಮಾದಾರ ಸ್ವಾಗತಿಸಿ, ಈರಯ್ಯ ಹೊಸಮಠ ವಂದಿಸಿದರು. ಪತ್ರಕರ್ತ ಮಹೇಶ್ ಆರಿ ಮತ್ತು ಎಂ ಕೆ ಕುಲಗೋಡ ಹಾಗೂ  1987-88ರ ಎಲ್ಲ ಸಹಪಾಠಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ