ಉದ್ಯೋಗಾವಕಾಶ ನಿರ್ಮಾಣದತ್ತ ಸುಕೋ ಬ್ಯಾಂಕ್ ಅತ್ಯುತ್ತಮ ಹೆಜ್ಜೆ: ಡಿಸಿಎಂ ಅಶ್ವಥ್ ನಾರಾಯಣ
ಬಳ್ಳಾರಿ 09: ಸ್ಟಾರ್ಟ್ ಅಪ್ ಟು ಸೆಲ್ಫ್ ಎಂಪ್ಲಾಯ್ಮೆಂಟ್' ಎನ್ನುವ ಸುಕೊ ಬ್ಯಾಂಕಿನ ವಿಶೇಷ ಸಾಲ ಯೋಜನೆ ಮೂಲಕ ಉದ್ಯೋಗಾವಕಾಶಗಳ ನಿರ್ಮಾಣಕ್ಕೆ ಅತ್ಯುತ್ತಮ ಹೆಜ್ಜೆ ಎಂದು ಉಪ ಮುಖ್ಯಮಂತ್ರಿ ಸಿ.ಎನ್. ಅಶ್ವತ್ಥ ನಾರಾಯಣ್ ಹೇಳಿದರು.
ಬೆಂಗಳೂರು ನಗರದಿಂದ ವರ್ಚುಯಲ್ ಫ್ಲಾಟ್ ಫಾರಂ ಮೂಲಕ ಸುಕೋ ಬ್ಯಾಂಕಿನ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶ ಹೆಚ್ಚಿಸಬೇಕೆಂಬ ಹಿನ್ನಲೆ ರಾಜ್ಯ ಸರಕಾರ ಹಲವಾರು ಕಾರ್ಯಕ್ರಮ ಕೈಗೊಂಡಿದೆ. 10 ಲಕ್ಷ ಉದ್ಯೋಗಾವಕಾಶ ನಿರ್ಮಿಸುವುದು ನಮ್ಮ ಗುರಿಯಾಗಿದೆ. ಸ್ಟಾರ್ಟ್-ಅಪ್‍ಗಳ ಉದ್ಯಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವುದು, ಬೇಕಾದ ತರಬೇತಿ ಹಾಗೂ ಉದ್ಯಮ ಪ್ರಾರಂಭಿಸಬೇಕು ಎನ್ನುವವರಿಗೆ ಹೊಸ ಯೋಜನೆ ತಲುಪಿಸುವುದು ಅತ್ಯುತ್ತಮ ಕಲ್ಪನೆಯಾಗಿದೆ. ಇದರಿಂದ ಸ್ಟಾರ್ಟ್-ಅಪ್‍ಗಳ ವ್ಯವಹಾರ ಹೆಚ್ಚಾಗುವುದಲ್ಲದೆ, ಗ್ರಾಮೀಣ ಪ್ರದೇಶದ ಹಾಗೂ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ. ಇದು ಅತ್ಯುತ್ತಮ ಯೋಜನೆಯಾಗಿದ್ದು ರಾಜ್ಯ ಸರಕಾರದ ವತಿಯಿಂದ ಅಗತ್ಯವಿರುವ ಸಹಕಾರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ, ಮನೋಹರ್ ಮಸ್ಕಿ ಮಾತನಾಡಿ, ನಮ್ಮ ಪ್ರದೇಶದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಹೊಸ ರೀತಿಯ ಯೋಜನೆಯನ್ನು ಪ್ರಾರಂಭಿಸಲಾಗಿದೆ. 12 ಜಿಲ್ಲೆಗಳಲ್ಲಿ ಬ್ಯಾಂಕಿನ ಶಾಖೆಗಳಿದ್ದು, ಕರೋನಾ ಸಂಕಷ್ಟ ಕಾಲದಲ್ಲಿ ಸಣ್ಣ ಸಾಲಗಳನ್ನು ನೀಡುವ ಜನರ ಸಹಾಯಕ್ಕೆ ಮುಂದಾಗಿದ್ದೆವು. ಸ್ಟಾರ್ಟ್ ಅಪ್ ಕಂಪನಿಗಳಿಗೆ ಹಣಕಾಸಿನ ಸಹಾಯ ಒದಗಿಸಿ, ಅವರ ಮೂಲಕ ಅವರ ಉತ್ಪನ್ನಗಳನ್ನು ಬಳಸುವವರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ನಾಡಿನ ಜನರಿಗೆ ಆರೋಗ್ಯ ಸೇವೆಗಳು, ಆರೋಗ್ಯಯುತ ಆಹಾರ ಹಾಗೂ ಪರಿಸರ ಸಂರಕ್ಷಣೆಗೆ ಸಣ್ಣ ಸೇವೆ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಲಿ ಅಧ್ಯಕ್ಷ, ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ್ ಕಲಬುರಗಿಯಿಂದ ಆನ್-ಲೈನ್ ನಲ್ಲಿ ಭಾಗವಹಿಸಿ ಮತನಾಡಿ, ನಾಡಿನ ಯುವ ಜನರು ನೌಕರಿಗಳಿಗಾಗಿ ಹುಡುಕಾಡದೆ. ಇಂತಹ ಯೋಜನೆಗಳ ಲಾಭ ಪಡೆದುಕೊಂಡು ಸ್ವಯಂ ಉದ್ಯೋಗ ಆರಂಭಿಸಿ ತಾವೂ ಬೆಳದು ಇತರ ಯುವಜನರಿಗೆ ಉದ್ಯೋಗಗಳನ್ನು ಸೃಷ್ಟಿಸಬೇಕೆಂದು ಕರೆ ನೀಡಿದರು.
ಸುಕೋ ಬ್ಯಾಂಕಿನ ಅಧ್ಯಕ್ಷರಾದ ಮೋಹಿತ ಮಸ್ಕಿ ಮಾತನಾಡಿ, ಸುಕೋ ಬ್ಯಾಂಕ್ï ಯಾವಾಗಲೂ ವಿಶಿಷ್ಟ ಹಾಗೂ ವಿನೂತನ ಗ್ರಾಹಕ ಸ್ನೇಹಿ ಯೋಜನೆಗಳನ್ನು ರೂಪಿಸಿ ಜನರಿಗೆ ತಲುಪುವಂತೆ ಮಾಡುತ್ತಿದೆ. ತಂತ್ರಜ್ಞಾನ ಬಳಸುವಲ್ಲಿ ಸಹಕಾರಿ ಕ್ಷೇತ್ರದಲ್ಲಿ ಯಾವಾಗಲೂ ಮುಂಚೂಣಿ ಬ್ಯಾಂಕಾಗಿ ಅಭಿವೃದ್ದಿ ಹೊಂದುತ್ತಿದೆ. ಇಂದಿನ ಆನ್ಲೈನ್ ಮೂಲಕ ಯೋಜನೆ ಪ್ರಾರಂಭಿಸಿದ್ದು ಇದಕ್ಕೆ ಉದಾಹರಣೆಯಾಗಿದೆ. ಈ ವಿಶೇಷ ಯೋಜನೆಯಿಂದ ಸುಮಾರು 500 ಕ್ಕೂ ಹೆಚ್ಚಿನ ಯುವಕ ಯುವತಿಯರ ಸ್ವಾವಲಂಬನೆಯ ಬದುಕಿಗೆ ನೆರವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಎಂಎನ್ಎಸ್ ಸಂಸ್ಥೆಯ ನೀರಾ ಪ್ರಾಂಚೈಸಿ ನವೀನ್ ಶೆಟ್ಟಿ ಅವರಿಗೆ ಯೋಜನೆಯ ಮೊದಲ ಫಲಾನುಭವಿ ಪ್ರಮಾಣ ಪತ್ರವನ್ನು ನೀಡಲಾಯಿತು. ಬನಶ್ರೀ ಸಿಸ್ಟಂ ಪ್ರೈ ಲಿ ನ ಬ್ಯಾಟ್ - ಫ್ಲೈ ಪ್ರಾಂಚೈಸಿಯ ಮೊದಲ ಫಲಾನುಭವಿಯಾಗಿ ಸುನೀಲ್ ಕುಮಾರ್ ಪ್ರಮಾಣ ಪತ್ರವನ್ನು ಸ್ವೀಕರಿಸಿದರು. ಬೆಂಗಳೂರಿನ ವೆನ್ಫೈನ್ಸ್ ಟೆಕ್ನಾಲಜೀಸ್ ಪ್ರೈ ಲಿಮಿಟೆಡ್ ಸಂವಿತಾ ಉತ್ಪನ್ನದ ಮೊದಲ ಫಲಾನುಭವಿಯಾಗಿ ಪ್ರಮಾಣ ಪತ್ರವನ್ನು ಸ್ವೀಕರಿಸಿದರು.