ಅನ್ನದಾತರ ಬಾಳಿಗೆ ಕಹಿಯಾದ ಕಬ್ಬು ಬೆಳೆ : ಕಗ್ಗಂಟಾದ ಬೆಲೆ ನಿಗದಿ : ಬೆಳಗಾವಿ ಅಧಿವೇಶನಕ್ಕೆ ಕಾರ್ಮೋಡದ ಛಾಯೆ
ಪಾರೇಶ ಭೋಸಲೆ
ಬೆಳಗಾವಿ : ದೇವರು ವರ ಕೊಟ್ಟರೂ ಪುಜಾರಿ ವರ ನೀಡಲಿಲ್ಲ ಎಂಬ ನಾನುಡಿಯಂತೆ ಬೆಳಗಾವಿ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬೆಳೆಗೆ ಬೆಲೆ ನಿಗದಿ ಮಾಡದೆ ಇರುವ ಹಿನ್ನೆಲೆಯಲ್ಲಿ ಕಬ್ಬು ಬೆಳೆದ ರೈತರು ಬೆಲೆ ನಿಗದಿ ಮಾಡುವಂತೆ ಮತ್ತೆ ಕಬ್ಬು ಕಟಾವು ಮಾಡದೆ ಹೋರಾಟದ ಹಾದಿ ತುಳಿದಿದ್ದಾರೆ, ಅತ್ತ ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರಖಾನೆಗಳು ಬೆಲೆ ನಿಗದಿ ಮಾಡದೆ ಇರುವದು ಜಿಲ್ಲಾಡಳಿತಕ್ಕೆ ತಲೆನೋವುಂಟಾದರೆ ಇತ್ತ ಕಬ್ಬು ಬೆಳೆದ ಅನ್ನದಾತರ ಬಾಳಿಗೆ ಸಿಹಿಯಾಗಬೇಕಿದ್ದ ಕಬ್ಬಿನ ಬೆಳೆ ಈಗ ಕಹಿಯಾಗಿ ಪರಿಣಮಿಸಿದೆ.
ಹೌದು ಓದುಗರೆ ಬೀಜ, ಗೊಬ್ಬರ, ಕೀಟನಾಶಕ ಕಾಲ ಕಾಲಕ್ಕೆ ಬೆಳೆಗೆ ನೀರು ಹೀಗೆ ಹಲವಾರು ಸಂಕಷ್ಟಗಳ ನಡುವೆ ಹೊಲಗದ್ದೆಗಳಲ್ಲಿ ಕೂಲಿ ಕಾರ್ಮಿಕರು ಸಿಗದೆ ಗೋಳಾಡುತ್ತಿರುವ ರೈತ ಸಮುಹವು ಸಾಲ ಸೂಲ ಮಾಡಿದ ಬಳಿಕ ಕೈಗೆ ಬಂದ ಕಬ್ಬಿನ ಬೆಳೆ ತೆಗೆದು ಕಾರಖಾನೆಗೆ ಸಾಗಿಸಿ ಕಬ್ಬು ಬೆಳೆಯಲು ತಗುಲಿದ ಖರ್ಚು ವೆಚ್ವವನ್ನಾದರು ತೆಗೆದುಕೊಳ್ಳುವ ತವಕದಲ್ಲಿರುವಾಗ ಇತ್ತ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬೆಲೆ ನಿಗದಿ ಮಾಡದೆ ಇರುವದು ಕಬ್ಬು ಬೆಳೆಗಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ದೇವರು ವರ ಕೊಟ್ಟರು ಪೂಜಾರಿ ವರ ನೀಡಲಿಲ್ಲ ಎಂಬ ಗಾಧೆ ಮಾತಿನಂತೆ ಈ ಬಾರಿ ಮಳೆ ಚನ್ನಾಗಿ ಆಗಿರುವದರಿಂದ ಕಬ್ಬಿನ ಬೆಳೆ ಕೂಡಾ ಚನ್ನಾಗಿ ಬೆಳೆಯಲಾಗಿದೆ. ಆದರೆ ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರಖಾನೆಗಳು ಮಾತ್ರ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಪ್ರಾರಂಭಿಸಿವೆ. ಆದರೆ ಕಾರಖಾನೆಗಳಿಗೆ ಕಬ್ಬು ಪೂರೈಸುವ ರೈತರ ಕಬ್ಬಿಗೆ ಬೆಲೆ ನಿಗದಿ ಮಾಡದೆ ಇರುವದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕಬ್ಬು ಬೆಳೆಗಾರರು ಮತ್ತೆ ಹೋರಾಟದ ಹಾದಿ ತುಳಿದಿದ್ದು, ಈ ವಿಷಯವು ಬೆಳಗಾವಿ ಜಿಲ್ಲಾಡಳಿತಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ.
ನೆರೆಯ ಮಹಾರಾಷ್ಟ್ರ ರಾಜ್ಯದ ಕೆಲವು ಸಕ್ಕರೆ ಕಾರಖಾನೆಗಳು ಸದ್ಯ ಪ್ರತಿ ಮೇ. ಟನ್ ಕಬ್ಬಿನ ಬೆಳೆಗೆ 3500 ವರೆಗೆ ಕಬ್ಬಿಗೆ ಬೆಲೆ ನೀಡುತಿದ್ದು, ಮಹಾರಾಷ್ಟ್ರ ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆಯ ಕಬ್ಬು ಬೆಳೆಗಾರರು ಮಹಾರಾಷ್ಟ್ರ ಸಕ್ಕರೆ ಕಾರಖಾನೆಗಳತ್ತ ಮುಖ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಕೆಲವು ಸಕ್ಕರೆ ಕಾರ್ಖಾನೆಗಳು ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದು, ಕಬ್ಬು ಬೆಳೆಗಾರರು ಕಬ್ಬು ಪೂರೈಕೆ ಮಾಡದೆ ಹೋದಲ್ಲಿ ಕಾರ್ಖಾನೆಗಳು ಇನ್ನಷ್ಟು ಆರ್ಥಿಕ ತೊಂದರೆ ಯಲ್ಲಿ ಸಿಕ್ಕು ಬಳಲಿವೆ ಎನ್ನುವ ಮಾತು ಕೇಳಿ ಬರುತ್ತಿದೆ. ಜಿಲ್ಲೆಯಲ್ಲಿ ಕಾರ್ಖಾನೆಗಳು ಕಬ್ಬಿನ ಬಳೆಗೆ ಬೆಲೆ ನಿಗದಿ ಮಾಡುವವರೆಗೆ ಕಬ್ಬು ಪೂರೈಕೆ ಮಾಡುವದಿಲ್ಲ ಎಂದು ಪಟ್ಟು ಹಿಡಿದಿರುವ ಬೆಳೆಗಾರರು ಹೋರಾಟಕ್ಕೆ ಬೀದಿಗೆ ಇಳಿದಿದ್ದಾರೆ. ಈ ಇಬ್ಬರ ಜಗಳದಲ್ಲಿ ಮೂರನೇಯವರಾದ ಮಹಾರಾಷ್ಟ್ರ ಸಕ್ಕರೆ ಕಾರಖಾನೆಗಳು ಲಾಭ ಪಡೆದುಕೊಳ್ಳುತ್ತಿವೆ.
ಈ ನಿಟ್ಟಿನಲ್ಲಿ ಸರಕಾರ ಮತ್ತು ಬೆಳಗಾವಿ ಜಿಲ್ಲಾಡಳಿತ ಮಧ್ಯ ಪ್ರವೇಶ ಮಾಡಿ ರೈತರ ಕಬ್ಬಿನ ಬೆಳೆಯ ಬೆಲೆ ನಿಗದಿ ಗಾಗಿ ಒಂದು ನಿರ್ಧಾರ ತೆಗೆದುಕೊಳ್ಳುವದು ಒಳಿತಾಗಿದೆ. ಇಲ್ಲದೆ ಹೋದಲ್ಲಿ ಕಬ್ಬಿನ ಬೆಳೆ ಬೆಲೆ ನಿಗದಿ ಕಗ್ಗಂಟಾಗಿ ಡಿಸೆಂಬರ್ ನಲ್ಲಿ ಬೆಳೆಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನಕ್ಕೆ ಮಾರಕವಾಗಲಿದೆ ಎನ್ನುವದನ್ನು ನಾವು ಅಲ್ಲ ಗಳಿಯುವಂತಿಲ್ಲ.
ಮಹಾರಾಷ್ಟ್ರ ಕಾರಖಾನೆಗಳು 3500 ಬೆಲೆ ನೀಡುತ್ತಿವೆ : ಪೂಜೇರಿ
ಬೀಜ, ಗೊಬ್ಬರ, ಕೀಟನಾಶಕ ಖರೀದಿ ಹಾಗೂ ಕೂಲಿ ಕಾರ್ಮಿಕರ ಸಂಬಳ ಹೀಗೆ ಎಲ್ಲ ಸೇರಿ ಪ್ರತಿ ಮೇ. ಟನ್ ಕಬ್ಬು ಬೆಳೆಯಲು ಸುಮಾರು 4700 ವರೆಗೆ ಖರ್ಚು ಬರುತಿದ್ದರೂ ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರಖಾನೆಗಳು ಕಬ್ಬಿಗೆ ಸರಿಯಾದ ಬೆಲೆ ನೀಡದೆ ಕಾಲಹರಣ ಮಾಡುತ್ತಿವೆ. ಇದರಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ ಎಂದು ರೈತ ಮುಖಂಡ ಚೂನಪ್ಪ ಪೂಜಾರಿ ಹೇಳಿದ್ದಾರೆ.
ನೆರೆಯ ಮಹಾರಾಷ್ಟ್ರ ದ ಸಕ್ಕರೆ ಕಾರ್ಖಾನೆಗಳು ಪ್ರತಿ ಮೇ. ಟನ್ ಕಬ್ಬಿಗೆ 3500 ರೂ. ಬೆಲೆ ನೀಡುತ್ತಿದ್ದು, ಬೆಳಗಾವಿ ಜಿಲ್ಲೆಯ ಕಾರಖಾನೆಗಳು ಮಾತ್ರ ಇಲ್ಲಿಯ ವರೆಗೆ ಬೆಲೆ ನಿಗದಿ ಮಾಡುತ್ತಿಲ್ಲ. ರೈತರ ಕಬ್ಬಿಗೆ ಯೋಗ್ಯ ಬೆಲೆ ನೀಡುವ ವರೆಗೆ ಕಬ್ಬು ಬೆಳೆಗಾರರ ಹೋರಾಟ ಮುಂದೆ ವರೆಯಲಿದೆ ಎಂದು ಹೇಳಿದ್ದಾರೆ.