ವ್ಯಾಪಾರ ಮತ್ತು ವಾಣಿಜ್ಯೋದ್ಯಮ ಅಭಿವೃದ್ಧಿಗೆ ಸುಕೋ ಬ್ಯಾಂಕ್ ನೆರವಾಗುತ್ತಿದೆ : ಎನ್. ಯಶವಂತರಾಜ್
ಬಳ್ಳಾರಿ 31: ವ್ಯಾಪಾರ ಮತ್ತು ವಾಣಿಜ್ಯೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಸುಕೋ ಬ್ಯಾಂಕ್ ಸಾಕಷ್ಟು ನೆರವಾಗುತ್ತಿದೆ ಎಂದು ಜಿಲ್ಲಾ ಛೇಂಬರ್ ಆಫ್ ಕಾಮರ್ಸ್‌ನ ಕಾರ್ಯದರ್ಶಿ ಎನ್. ಯಶವಂತರಾಜ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಕೋ ಬ್ಯಾಂಕ್‌ನ 2022ರ ಸಾಲಿನ ಕ್ಯಾಲೆಂಡರ್ ಅನ್ನು ಬ್ಯಾಂಕಿನ ಮುಖ್ಯ ಶಾಖೆಯಲ್ಲಿ ಶುಕ್ರವಾರ ಬಿಡುಗಡೆ ಮಾಡಿ ಅತಿಥಿಗಳಾಗಿ ಅವರು ಮಾತನಾಡಿದರು.
‘ಕೋವಿಡ್-19' ; ಹವಾಮಾನ ವೈಪ್ಯರೀತ್ಯ ಮತ್ತು ಆರ್ಥಿಕ ಸಂಕಷ್ಟದ ಕಾಲದಲ್ಲೂ ಸುಕೋ ಬ್ಯಾಂಕು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳ ಜೊತೆ ಸ್ಪರ್ಧಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರ ಅಗತ್ಯಗಳು ; ಮಾರುಕಟ್ಟೆಯ ಬೇಡಿಕೆಗಳಿಗೆ ಅನುಗುಣವಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿ ಜನಪ್ರಿಯಗೊಳ್ಳುತ್ತಿದೆ ಎಂದರು.
ಮತ್ತೋರ್ವ ಅತಿಥಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ರಮೇಶಗೌಡ ಪಾಟೀಲ್ ಅವರು, ಸುಕೋ ಬ್ಯಾಂಕು ಕೇವಲ ಆರ್ಥಿಕ ಚಟುವಟಿಕೆಗೆ ಸೀಮಿತಗೊಳ್ಳದೇ ಸ್ಥಳೀಯ ಕಲಾವಿದರನ್ನು ಗುರುತಿಸಿ, ಸ್ಥಳೀಯ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಸರವನ್ನು ಪ್ರೋತ್ಸಾಹಿಸುತ್ತಿದೆ ಎಂದರು.
ಬ್ಯಾಂಕಿನ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ಕಾರ್ಯಕ್ರಮದ ಅಧ್ಯಕ್ಷವಹಿಸಿ, ಸುಕೋ ಬ್ಯಾಂಕು ಸ್ಮಾಲ್ ಫೈನಾನ್ಸ್ ಬ್ಯಾಂಕು ಆಗಿ ಪರಿವರ್ತನೆ ಆಗುವಲ್ಲಿ ಪ್ರಯತ್ನಿಸುತ್ತಿದೆ. ಕಾರಟಗಿಯ ಶ್ರೀಶರಣಬಸವೇಶ್ವರ ಸಹಕಾರಿ ಬ್ಯಾಂಕನ್ನು ಸುಕೋ ಬ್ಯಾಂಕಿನೊಂದಿಗೆ ವೀಲೀನಗೊಳಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಸಧ್ಯದಲ್ಲೇ 29ನೇ ಶಾಖೆಯಾಗಿ ಕಾರಟಗಿಯಲ್ಲಿ ಆರಂಭಗೊಳ್ಳಲಿದೆ. ಖಾತೆಯ ಗ್ರಾಹಕರು, ಷೇರುದಾರರು ಮತ್ತು ಹಿತೈಷಿಗಳ ವಿಶ್ವಾಸದೊಂದಿಗೆ ಬ್ಯಾಂಕು ಅಭಿವೃದ್ಧಿ ಸಾಧಿಸುತ್ತಿದೆ ಎಂದರು.
ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಗೀರೀಶ್ ಎಂ.ಆರ್. ಅವರು ಮಾತನಾಡಿ, ಸುಕೋ ಬ್ಯಾಂಕು ಸ್ಪರ್ಧಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಗ್ರಾಹಕರಿಗೆ ಇನ್ನೂ ಹೆಚ್ಚಿನ - ಉತ್ತಮವಾದ ಸೇವೆ ಸಲ್ಲಿಸಲು ಗ್ರಾಹಕರ ಅಭಿಪ್ರಾಯ ; ವಿಚಾರಗಳಿಗೆ ಮುಕ್ತ ಅವಕಾಶವನ್ನು ಕಲ್ಪಿಸುತ್ತಿದೆ ಎಂದರು.
ವಿಎಸ್ ಲಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಷಡಕ್ಷರಗೌಡ ಅವರು, ಸುಕೋ ಬ್ಯಾಂಕಿನ ಅಭಿವೃದ್ಧಿಯನ್ನು ಶ್ಲಾಘಿಸಿ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕ ಸ್ನೇಹಿ ಯೋಜನೆಗಳನ್ನು ಬ್ಯಾಂಕು ಜಾರಿ ಮಾಡಲಿ ಎಂದು ಶುಭ ಹಾರೈಸಿದರು.
ಬ್ಯಾಂಕಿನ ಸಿಬ್ಬಂದಿ ಶೋಭಾ ಮತ್ತು ದೀಪ ಅವರು ಪ್ರಾರ್ಥನೆ ಮಾಡಿದರು. ಮೇನೇಜರ್ ಎಚ್.ಎಂ. ಅಡವಿಸ್ವಾಮಿ ಅವರು ಕಾರ್ಯಕ್ರಮ ನಿರೂಪಿಸಿದರು. ಶಾಖೆಯ ವ್ಯವಸ್ಥಾಪಕ ವೀರನಗೌಡ ಅವರು ವಂದನಾರೆ್ಣ ಸಲ್ಲಿಸಿದರು.