ಮಹಲಿಂಗಪುರ

ಟೀಚರ್‌ಗೆ ನೇಚರ್ ಪಾಠ ಹೇಳಿದ ವಿದ್ಯಾರ್ಥಿಗಳು

ಟೀಚರ್‌ಗೆ ನೇಚರ್ ಪಾಠ ಹೇಳಿದ ವಿದ್ಯಾರ್ಥಿಗಳು

ಶಿಕ್ಷಕರಿಗೆ ಉಸಿರಿನ ಉಡುಗೊರೆ ನೀಡಿ ಪರಿಸರ ಸಂದೇಶ 

ಮಹಾಲಿಂಗಪುರ 06: ಪಾಠ ಹೇಳಿದ ಶಿಕ್ಷಕರಿಗೆ ಹೂಗುಚ್ಚ, ಲೇಖನಿ ನೀಡಿ, ಸಿಹಿ ತಿನ್ನಿಸಿ ಗೌರವ ಸೂಚಿಸುವ ಮೂಲಕ ಶಿಕ್ಷಕ ದಿನಾಚರಣೆ ಆಚರಿಸುವುದು ಸಾಮಾನ್ಯ. ಆದರೆ ಮಹಾಲಿಂಗಪುರದ ಕೆಎಲ್‌ಇ ಡಿಪ್ಲೋಮಾ ಕಾಲೇಜಿನ ವಿದ್ಯಾರ್ಥಿಗಳು ಪರಿಸರ ಸ್ನೇಹಿ ಕಾರ್ಯಕ್ರಮ ಮಾಡಿ ಗಮನ ಸೆಳೆದರು.  

ಶಿಕ್ಷಕರಿಗೆ ತಲಾ ಒಂದೊಂದು ಸಸಿ ನೀಡಿ, ಅದರ ಕೊರಳಿಗೆ ಪರಿಸರದ ಮಹತ್ವ ಹಾಗೂ ಶಿಕ್ಷಕರ ವ್ಯಕ್ತಿತ್ವದ ಬಗ್ಗೆ ಕೋಟ್ (ಸುಭಾಷಿತ) ಬರೆದ ಕಾರ್ಡ್‌ನ್ನು ಟ್ಯಾಗ್ ಮಾಡಿ ಮರ ನೆಟ್ಟು ಪರಿಸರ ಉಳಿಸಿ ಎಂದು ಮನವಿ ಮಾಡುವ ಮೂಲಕ ಟೀಚರ್‌ಗೆ ನೇಚರ್ ಪಾಠ ಹೇಳಿ ಗಮನ ಸೆಳೆದರು.  

ನೂರಾರು ಗಿಡಗಳ ಹಚ್ಚ ಹಸಿರಿನಿಂದ ಕಂಗೊಳಿಸುವ ಕಾಲೇಜಿನಲ್ಲಿ ಸಹಜವಾಗಿಯೇ ವಿದ್ಯಾರ್ಥಿಗಳಲ್ಲೂ ಹಸಿರು ಕಳಕಳಿ ಹಾಗೂ ಪರಿಸರ ಜಾಗೃತಿ ಬೆಳೆದಿದೆ. ಇಲ್ಲಿ ಯಾವುದೇ ಕಾರ್ಯಕ್ರಮವಾದರೂ ಕೃತಕ ಪ್ಲಾಸ್ಟಿಕ್ ಹೂಗಳ ಬೊಕ್ಕೆ ಬಳಸದೇ ಆವರಣದಲ್ಲೇ ಸಿಗುವ ನಾನಾ ಎಲೆ, ಹೂವುಗಳನ್ನು ಬಳಸಿ ತಾಜಾ ಹೂಗುಚ್ಚ ತಯಾರಿಸುತ್ತಾರೆ. ಅಂಥದ್ದರಲ್ಲಿ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲೂ ತಮ್ಮ ವಿಶೇಷ ಅರ್ಥಪೂರ್ಣ ಹಾಗೂ ಕಾಳಜಿಪೂರ್ವಕ ಸೃಜನಶೀಲತೆ ಮೆರೆತಿದ್ದಾರೆ. 

ಐದು ವಿಭಾಗಗಳು ಸೇರಿ 50ಕ್ಕೂ ಹೆಚ್ಚು ಸಿಬ್ಬಂದಿಗೆ ಪಾಟ್ ಸಹಿತ ತಲಾ ಒಂದೊಂದು ಸಸಿ ನೀಡಿ ಸನ್ಮಾನಿಸಿದ್ದಾರೆ. ಜೋಪಾನವಾಗಿ ಮನೆ ಮುಂದೆ ಬೆಳೆಸಿ ಎಂದು ಮನವಿ ಮಾಡಿದ್ದಾರೆ. ಉಳಿದಂತೆ ಕೇಕ್ ಕತ್ತರಿಸುವ, ಶಿಕ್ಷಕರಿಗೆ ನಾನಾ ಸ್ಪರ್ಧೆ ಏರಿ​‍್ಡಸುವ, ಬಹುಮಾನ ನೀಡುವ, ಉಪಹಾರ ಮಾಡಿಸುವ ಸಾಮಾನ್ಯ ಕಾರ್ಯಕ್ರಮ ಹಮ್ಮಿಕೊಂಡರೂ ಕೂಡ ಎಲ್ಲಕ್ಕಿಂತ ಹೆಚ್ಚು ಉಸಿರಿನ ಉಡುಗೊರೆಯಾಗಿ ಸಸಿ ನೀಡಿದ ಕಳಕಳಿಯೇ ನೆನಪಿನಲ್ಲಿ ಹಸಿಯಾಗಿ ಉಳಿಯಿತು. ಕಾರ್ಯಕ್ರಮ ಮುಗಿದ ಮೇಲೆ ಪ್ರತಿಯೊಬ್ಬ ಉಪನ್ಯಾಸಕರೂ ಹಾರ ತುರಾಯಿಗಿಂತ ಸಸಿಯನ್ನೇ ಜೋಪಾನವಾಗಿ ಮನೆಗೆ ಒಯ್ಯುತ್ತಿರುವ ದೃಶ್ಯ ಗಮನ ಸೆಳೆಯಿತು. 


ಸುದ್ದಿ ಓದಿ