ವಿದ್ಯಾರ್ಥಿ ಜೀವನ ತ್ಯಾಗದ ಜೀವನವಾದಾಗ ಮಾತ್ರ ಸುವರ್ಣ ಜೀವನ
ಮಹಾಲಿಂಗಪುರ: ವಿದ್ಯಾರ್ಥಿ ಯ ಜೀವನ ತ್ಯಾಗದ ಜೀವನವಾದಾಗ ಮಾತ್ರ ಮುಂದೆ ಸುವರ್ಣಜೀವನವಾಗಲು ಸಾಧ್ಯ ಎಂದು ರನ್ನಬೆಳಗಲಿಯ ಶಿಕ್ಷಕ, ರಾಘವೇಂದ್ರ ನೀಲನ್ನವರ ಹೇಳಿದರು.
ಸ್ಥಳೀಯ ಕೆಎಲ್ಇ ಪಾಲಿಟೆಕ್ನಿಕ್ನಲ್ಲಿ ನೂತನ ವಿದ್ಯಾರ್ಥಿ ಗಳಿಗೆ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನದ ಸರಣಿ ಸಂಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಯಶಸ್ವಿ ಜೀವನಕ್ಕೆ ಬೇಕಾದ ಅಮೂಲ್ಯ ವಿಚಾರಗಳನ್ನು ತಿಳಿಯಬೇಕು ಶಿಸ್ತು, ಬದ್ದತೆ, ಪ್ರಯತ್ನಶಿಲತೆ ಎಂಬ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ನಂತರ ಯೋಗ ಧ್ಯಾನ ಪ್ರಾಣಾಯಾಮದ ಪ್ರಾತ್ಯಕ್ಷಿಕೆ ತೋರಿಸಿ ಇವು ನಿತ್ಯದ ದಿನಚರಿಯಲ್ಲಿದ್ದರೆ ಬದುಕಿಗೆ ಹೊಸ ಆಯಾಮ ಸಿಗಲಿದೆ ಎಂದರು.
ಪ್ರಾಚಾರ್ಯ ಎಸ್.ಐ.ಕುಂದಗೋಳ ಮಾತನಾಡಿ, ವಿದ್ಯಾರ್ಥಿ ಗಳು ಶ್ರದ್ದೆಯಿಂದ ಕಲಿಕೆ ಕಡೆ ಮಾತ್ರ ಗಮನ ನೀಡಬೇಕು. ಬೇಡವಾದ ಬಾಕಿ ವಿಷಯಗಳನ್ನೆಲ್ಲೆ ತಲೆಯಲ್ಲಿ ತುಂಬಿಕೊಂಡು ತೊಳಲಾಡಬೇಡಿ. ತಲೆ ಎಂಬುದು ಜ್ಞಾನದ ಬುಟ್ಟಿಯಾಗಬೇಕೇ ಹೊರತು ಕಸದ ತೊಟ್ಟಿಯಾಗಬಾರದು ಎಂದರು. ಆಕಾಶ್ ಕೋಚಿಂಗ್ ಸೆಂಟರ್ ಸಂಸ್ಥಾಪಕ ಎಸ್.ಎಚ್.ಮೆಳವಂಕಿ ಮಾತನಾಡಿದರು. ಉಪನ್ಯಾಸಕ ಎಸ್.ವಿ.ಸಿದ್ನಾಳ, ಸುಭಾಸ್ ಮೂಶಿ ಹಾಗೂ ಕಾಲೇಜಿನ ಸಿಬ್ಬಂದಿ ಇದ್ದರು.