ಅಕ್ರಮ ಮದ್ಯ, ಮಾದಕ ದ್ರವ್ಯ ಹಾಗೂ ರಾಸಾಯನಿಕ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ
ಲೋಕದರ್ಶನ ವರದಿ
ಬಳ್ಳಾರಿ 15: ಜಿಲ್ಲೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು, ಅಕ್ರಮ ಮದ್ಯ ಮಾರಾಟ, ಮಾದಕ ದ್ರವ್ಯ ಹಾಗೂ ಅನುಮಾನಾಸ್ಪದ ರಾಸಾಯನಿಕ ಬಳಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.
ನಗರದ ನೂತನ ಜಿಲ್ಲಾಡಳಿತ ಭವನದ ವಿಡಿಯೋ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
*ಗಾಂಜಾ ಪ್ರಕರಣಗಳ ಪತ್ತೆ ಹಾಗೂ ಕಾರ್ಯಾಚರಣೆ:*
ಅಬಕಾರಿ ಇಲಾಖೆಯ ವರದಿಯ ಪ್ರಕಾರ, ಜನವರಿಯಿಂದ ಈವರೆಗೆ ಎನ್ಡಿಪಿಎಸ್ ಕಾಯ್ದೆಯಡಿ 10 ಪ್ರಕರಣಗಳು ದಾಖಲಾಗಿದ್ದು, ಒಟ್ಟು 14.150 ಕೆ.ಜಿ. ಒಣ ಗಾಂಜಾ ಹಾಗೂ 5 ಗಾಂಜಾ ಗಿಡಗಳನ್ನು ಜಪ್ತಿ ಮಾಡಲಾಗಿದೆ. ಜಿಲ್ಲೆಯ ಸಂಡೂರು ಮತ್ತು ಬಳ್ಳಾರಿ ತಾಲೂಕುಗಳಲ್ಲಿ ಗಾಂಜಾ ಪತ್ತೆ ಪ್ರಮಾಣ ಹೆಚ್ಚಾಗಿದ್ದು, ಸಿರುಗುಪ್ಪ ಭಾಗದಲ್ಲಿ ಹಿಂದಿನ ವರ್ಷಗಳಲ್ಲಿ ಗಾಂಜಾ ಬೆಳೆ ಪತ್ತೆಯಾಗಿದ್ದರೂ, ಈ ಬಾರಿ ನಿರಂತರ ಜಾಗೃತಿಯಿಂದಾಗಿ ನಿಯಂತ್ರಣದಲ್ಲಿದೆ. ಗಾಂಜಾ ಸೇವನೆ ಮಾಡುತ್ತಿರುವವರಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ 20ರ ಆಸುಪಾಸಿನ ಯುವಕರೇ ಹೆಚ್ಚಾಗಿರುವುದು ಕಳವಳಕ್ಕೆ ಕಾರಣವಾಗಿದೆ ಎಂದು ಅಬಕಾರಿ ಅಧಿಕಾರಿಗಳು ಮಾಹಿತಿ ನೀಡಿದರು.
*ಕಲಬೆರಕೆ ಸೇಂದಿ ಮತ್ತು ನೆರೆರಾಜ್ಯದಿಂದ ಅಕ್ರಮ ಸಾಗಾಟ:*
ಆಂಧ್ರ್ರದೇಶದ ಗಡಿ ಭಾಗದಿಂದ ಜಿಲ್ಲೆಗೆ ಅಕ್ರಮವಾಗಿ ಕಲಬೆರಕೆ ಸೇಂದಿ ಸರಬರಾಜಾಗುತ್ತಿದೆ. ಜಪ್ತಿ ಮಾಡಲಾದ ಸೇಂದಿ ಮಾದರಿಗಳಲ್ಲಿ ನಿಷೇಧಿತ ‘ಕ್ಲೋರಾಲ್ ಹೈಡ್ರೇಟ್’ ಅಂಶ ಇರುವುದು ಲ್ಯಾಬ್ ವರದಿಗಳಲ್ಲಿ ದೃಢಪಟ್ಟಿದೆ. ಪ್ರಸಕ್ತ ಸಾಲಿನಲ್ಲಿ 61 ಪ್ರಕರಣಗಳನ್ನು ದಾಖಲಿಸಿ, 46 ದ್ವಿಚಕ್ರ ವಾಹನಗಳು ಹಾಗೂ ಸುಮಾರು 950 ಲೀಟರ್ ಕಲಬೆರಕೆ ಸೇಂದಿಯನ್ನು ವಶಪಡಿಸಿಕೊಳ್ಳಲಾಗಿದೆ. ಗಡಿಭಾಗದಲ್ಲಿ ಸೂಕ್ತ ಬೆಂಬಲ ಸಿಗದ ಕಾರಣ, ಆಂಧ್ರ್ರದೇಶದ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಪತ್ರ ವ್ಯವಹಾರ ನಡೆಸಿ ಜಂಟಿ ಕಾರ್ಯಾಚರಣೆ ನಡೆಸಬೇಕು ಎಂದು ತಿಳಿಸಿದರು.