ಉದ್ಯೋಗ ಹುಡುಕುವ ಜಾಯಮಾನ ಬಿಟ್ಟು ಉದ್ಯೋಗ ನೀಡುವ ಯಜಮಾನರಾಗಿ
ಕೆಎಲ್ಇ ಪಾಲಿಟೆಕ್ನಿಕ್ನಲ್ಲಿ ತಾಂತ್ರಿಕ ವಿದ್ಯಾರ್ಥಿಗಳಿಗೆ ಶಿವಲಿಂಗ ಸಿದ್ನಾಳ ಕರೆ
ಮಹಾಲಿಂಗಪುರ 28: ವಿದ್ಯಾರ್ಥಿಗಳು ಜ್ಞಾನಕ್ಕಿಂತ ಹೆಚ್ಚಾಗಿ ಕೌಶಲ್ಯ ಬೆಳೆಸಿಕೊಂಡು ಸಾಧನೆಯ ಶಿಖರಕ್ಕೇರಬೇಕು. ಉದ್ಯೋಗ ಹುಡುಕುವ ಜಾಯಮಾನ ಬಿಟ್ಟು ಉದ್ಯೋಗ ನೀಡುವ ಯಜಮಾನರಾಗಬೇಕು ಎಂದು ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು.
ಸ್ಥಳೀಯ ಕೆಎಲ್ಇ ಪಾಲಿಟೆಕ್ನಿಕ್ನಲ್ಲಿ ನೂತನ ವಿದ್ಯರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಧ್ಯಾನ ಮತ್ತು ಕೌಶಲ್ಯ ದೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನೌಕರಿಯಿಂದ ನಮ್ಮ ಅಗತ್ಯಗಳನ್ನು ಈಡೇರಿಸಿಕೊಳ್ಳಬಹುದೇ ಹೊರತು ನಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ತಾಂತ್ರಿಕ ವಿದ್ಯಾರ್ಥಿಗಳು ಉದ್ಯಮಿಯಾಗಿ ಉದ್ಯೋಗ ನೀಡುವ ಸಂಕಲ್ಪ ಮಾಡಬೇಕು ಎಂದರು.
ಶಿಕ್ಷಕಿ ಜಯಶ್ರೀ ಹಿರೇಮಠ ಮಾತನಾಡಿ ಧ್ಯಾನ ಎಲ್ಲ ಸಾಧನೆಗಳಿಗೆ ದಿವ್ಯ ಸಾಧನವಾಗಿದೆ ಎಂದು ಹೇಳಿ ವಿದ್ಯಾರ್ಥಿಗಳಿಗೆ 10 ನಿಮಿಷ ಧ್ಯಾನ ತರಬೇತಿ ನೀಡಿದರು. ಪ್ರಾಚಾರ್ಯ ಎಸ್.ಐ.ಕುಂದಗೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಧ್ಯಾನ ಮತ್ತು ಏಕಾಗ್ರತೆ ಇದ್ದರೆ ಜ್ಞಾನ ಮತ್ತು ಕೌಶಲ್ಯ ಬೆಳೆಸಿಕೊಳ್ಳಲು ಸಾಧ್ಯ. ಉತ್ತಮ ಸಾಧನೆಗೆ ಧ್ಯಾನವೇ ಸೋಪಾನ ಎಂದರು.
ಧ್ಯಾನಚಿಂತಾಮಣಿ ಜಯಶ್ರೀ ಹಿರೇಮಠ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಅಮಿತ ಜಾಧವ, ಮಂಜುನಾಥ ಅರಕೇರಿ, ವಿಶಾಲ ಮೆಟಗುಡ್ಡ, ಚೇತನ ಕುಂದರಗಿ, ಮಿನಾಜ ಅತ್ತಾರ, ಸವಿತಾ ಬೀಳಗಿ, ನಿರ್ಮಲಾ ಫಕೀರಪುರ, ಮಹಾದೇವಿ ಅಂಬಿ, ಅಂಜನಾ ಮಲಾಜ್, ಪ್ರಿಯಾ ಸೋನಾರ, ವರ್ಷಾ ಭಜಂತ್ರಿ, ಗೀತಾ ಉಪಾಸೆ, ಶಿಲ್ಪಾ ಬೀರನಗಡ್ಡಿ ಇದ್ದರು.
.