ಬಳ್ಳಾರಿ

ಕಟ್ಟಡ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯವ್ಯಾಪಿ ಪ್ರತಿಭಟನೆ: ಕಾ.ಎ.ದೇವದಾಸ್

ಕಟ್ಟಡ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯವ್ಯಾಪಿ ಪ್ರತಿಭಟನೆ: ಕಾ.ಎ.ದೇವದಾಸ್

ಬಳ್ಳಾರಿ 22 : ಶೈಕ್ಷಣಿಕ ಸಹಾಯಧನ ಕಡಿತಗೊಳಿಸಿ ಆದೇಶ ಹಿಂಪಡೆದು, ಎರಡು ವರ್ಷಗಳಿಂದ ಬಾಕಿ ಇರುವ ಶೈಕ್ಷಣಿಕ ಸಹಾಯಧನವನ್ನು ಬಿಡುಗಡೆ ಮಾಡಬೇಕು, ಹೊಸ ಕಾರ್ಡ್‌ ಮತ್ತು ನವೀಕರಣ ಮಾಡುವುದನ್ನು ಸರಳೀಕರಣಗೊಳಿಸಬೇಕು ಮತ್ತು ನೈಜ ಕಟ್ಟಡ ಕಾರ್ಮಿಕರಿಗೆ ಮಂಡಳಿಯ ಘೋಷಿತ ಸೌಲಭ್ಯಗಳನ್ನು ಖಾತ್ರಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಎಐಯುಟಿಯುಸಿಗೆ ಸಂಯೋಜಿತವಾದ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕ ಸಂಘ(ರಿ) ಬಳ್ಳಾರಿ ಜಿಲ್ಲಾ ಸಮಿತಿಯಿಂದ ಕಾರ್ಮಿಕ ಕಛೇರಿಯಲ್ಲಿ ಪ್ರತಿಭಟನೆಯನ್ನು ಸಂಘಟಿಸಲಾಗಿತ್ತು. ರಾಜ್ಯವ್ಯಾಪಿ ಪ್ರತಿಭಟನೆಯ ಭಾಗವಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. 

ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕ ಸಂಘ(ರಿ)ದ ರಾಜ್ಯ ಅಧ್ಯಕ್ಷರು ಹಾಗೂ ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷರಾದ ಕಾ.ಎ.ದೇವದಾಸ್ ಅವರು ಮಾತನಾಡುತ್ತಾ ನಿರಂತರವಾದ ಹೋರಾಟದ ಫಲವಾಗಿ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆಯಾಗಿದೆ. ಆದರೆ ಪ್ರಾರಂಭದಲ್ಲಿ ಕಟ್ಟಡ ಕಾರ್ಮಿಕರಿಗೆ ಇದರಿಂದ ಹಲವಾರು ಅನುಕೂಲಗಳಾಗಿದ್ದರೂ, ಇತ್ತೀಚಿಗೆ ತಂದಿರುವ ಹಲವಾರು ಹೊಸ ಬದಲಾವಣೆಗಳಿಂದಾಗಿ ನೈಜ ಕಾರ್ಮಿಕರು ಕಟ್ಟಡ ಕಾರ್ಮಿಕ ಮಂಡಳಿಯ ಸದಸ್ಯತ್ವವನ್ನು ಮುಂದುವರಿಸಿಕೊಂಡು ಹೋಗಲು ಹಾಗೂ ಹೊಸ ಸದಸ್ಯತ್ವವನ್ನು ಪಡೆದುಕೊಳ್ಳಲು, ಸದಸ್ಯ ವ್ಯವಸ್ಥೆಯಲ್ಲಿ ಅರ್ಜಿ ಹಾಕಲು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಲ್ಯಾಪ್‌ಟಾಪ್, ಟ್ಯಾಬ್ ಮುಂತಾದ ಕಿಟ್‌ಗಳ ವಿತರಣೆ ಬೇಡ, ಬದಲಿಗೆ ನೇರವಾಗಿ ಕಾರ್ಮಿಕರಿಗೆ ಈಗಾಗಲೇ ಇರುವಂತಹ ಕಟ್ಟಡ ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯ ಹಾಗೂ ಮಕ್ಕಳಿಗೆ ಶೈಕ್ಷಣಿಕ ಸಹಾಯಧನದ ಮೊತ್ತವನ್ನು ಹೆಚ್ಚಿಸಿ, ಸರಿಯಾಗಿ ಸಮಯಕ್ಕೆ ಪಾವತಿ ಮಾಡುವಂತೆ ಒತ್ತಾಯ ಮಾಡಲಾಗಿದೆ. ಆದರೂ ವಿವಿಧ ಕಿಟ್‌ಗಳ ಟೆಂಡರ್ ಪ್ರಕ್ರಿಯೆಯಲ್ಲಿ ಮಂಡಳಿ ಹಣ ಪೋಲು ಮಾಡಿ ಭ್ರಷ್ಟಾಚಾರ, ಹಗರಣಗಳು ನಡೆದಿರುವುದು ಅರೋಪ ಹೊತ್ತಿರುವ ಮಂಡಳಿ ಇತ್ತೀಚಿಗೆ ಲ್ಯಾಪ್ಟಾಪ್ ವಿತರಣೆಯಲ್ಲೂ ಹಗರಣದಿಂದ ಮುಕ್ತವಾಗಿಲ್ಲದ್ದು ಕಂಡುಬಂದಿದೆ.  

ಕಿಟ್‌ಗಳ ವಿತರಣೆಗೆ ಕಾರ್ಮಿಕ ಸಂಘಟನೆಗಳ ಆಕ್ಷೇಪ, ವಿರೋಧವಿದ್ದರೂ, ಇತ್ತೀಚಿಗೆ ಇಮ್ಮ್ಯೂನಿಟಿ ಕಿಟ್ ಎಂಬ ಹೊಸ ಕಿಟ್‌ಅನ್ನು ವಿತರಿಸುತ್ತಿರುವುದು ಕಾರ್ಮಿಕ ವಿರೋಧಿ ನಡೆಯನ್ನು ಸೂಚಿಸುತ್ತದೆ.  ಕಿಟ್‌ಗಳ ವಿತರಣೆಯಲ್ಲಿ ಇರುವ ಆಸಕ್ತಿ, ಪ್ರಸ್ತುತದ ಕಡಿತಗೊಂಡ ಸ್ಕಾಲರ್‌ಷಿಪ್ ಮೊತ್ತವನ್ನು ಹಿಂಪಡೆದು, ಈ ಹಿಂದಿನ ಮೊತ್ತವನ್ನು ನೀಡುವಲ್ಲಿ ಇರದೆ ಇರುವುದು, ಹಲವು ಅನುಮಾನಗಳಿಗೆ ಎಡೆ ಮಾಡುತ್ತದೆ. ಇನ್ನು ಮದುವೆ ಹಾಗೂ ಇನ್ನಿತರ ಸೌಲಭ್ಯಗಳಂತೂ ಕಾರ್ಮಿಕರು ಕಾದು ಕಾದು ಮಂಡಳಿಯ ಕಾರ್ಯ ವೈಖರಿಯಿಂದ ರೋಸಿ ಹೋಗಿದ್ದಾರೆ. ಈ ಹಿನ್ನಲೆಯಲ್ಲಿ ಕಟ್ಟಡ ಕಾರ್ಮಿಕರು ಸಂಘಟಿತ ಹೋರಾಟಕ್ಕೆ ಸಜ್ಜಾಗಬೇಕು. ಆಗಷ್ಟ್‌ 5 ರಂದು ರಾಜ್ಯ ಮಟ್ಟದಲ್ಲೂ ಬೃಹತ್ ಹೋರಾಟವಿದೆ. ಇದನ್ನು ಕೂಡ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು. 

ಅಧ್ಯಕ್ಷತೆಯನ್ನು  ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕ ಸಂಘ(ರಿ)ದ ಜಿಲ್ಲಾ ಕಾರ್ಯದರ್ಶಿ ಜಿ.ಸುರೇಶ್ ವಹಿಸಿದ್ದರು. ಮುಖಂಡರಾದ ಶರ್ಮಾಸ್, ನೀಲಪ್ಪ, ಅಂಜಿನಿ, ಜಯರಾಜ್, ಪ್ರಕಾಶ್, ಮಂಜು ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ