ಬಳ್ಳಾರಿಯಲ್ಲಿ ರಾಜ್ಯ ಮಟ್ಟದ ಸಂಗೀತ ಕಾರ್ಯಾಗಾರ
ಬಳ್ಳಾರಿ 25: ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಅನಾದಿಕಾಲದಿಂದಲೂ ಸಂಗೀತ, ಹಾಡುಗಾರಿಕೆ ಒಂದು ಪರಿಣಾಮಕಾರಿ ಮಾಧ್ಯಮವಾಗಿ ಕೆಲಸ ಮಾಡಿದೆ. ನಾಡಿನ ವಚನಕಾರರು, ದಾಸ ಶ್ರೇಷ್ಠರು, ಸಂತರು ಸಂಗೀತವನ್ನು ಒಂದು ಪರಿಣಾಮಕಾರಿ ಮಾಧ್ಯಮವನ್ನಾಗಿ ಬಳಸಿಕೊಂಡಿದ್ದಾರೆ. ಏಕೆಂದರೆ ಸಮಾಜದ ಪರಿವರ್ತನೆಯಲ್ಲಿ ಸಂಗೀತವು ಬಹು ಮುಖ್ಯ ಪಾತ್ರ ವಹಿಸುತ್ತದೆ. ಮಾತುಗಳಲ್ಲಿ ತಲುಪಿಸಲಾಗದ ಅನೇಕ ವಿಚಾರಗಳನ್ನು ಹಾಡಿನ ಮೂಲಕ ಕೇಳುಗರ ಮನ ಮುಟ್ಟಿಸಬಹುದು ಎಂದು ಕರ್ನಾಟಕ ಜನಪದ ಅಕಾಡಮಿ ಸದಸ್ಯರಾದ ಕೆ. ಕೆ. ದೇವಾನಂದ ವರ್ರಸಾದ್ ಅವರು ನುಡಿದರು.
ಯುವಜನ ಸಂಘಟನೆ ಎಐಡಿವೈಓ ಮತ್ತು ಯುವಜನ ಸಾಂಸ್ಕೃತಿಕ ವೇದಿಕೆಯ ಸಹಯೋಗದಲ್ಲಿ ಬಳ್ಳಾರಿ ನಗರದ ಗಾಂಧಿ ಭವನದಲ್ಲಿ ಪ್ರಾರಂಭವಾದ ಎರಡು ದಿನಗಳ ರಾಜ್ಯಮಟ್ಟದ ಸಂಗೀತ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂದು ಸಮೂಹ ಮಾಧ್ಯಮಗಳು ಅದರಲ್ಲೂ ಮೊಬೈಲ್ನ ಹಾವಳಿಗೆ ಸಿಲುಕಿ ನಮ್ಮ ಮುಂದಿನ ಪೀಳಿಗೆ ಸಾಂಸ್ಕೃತಿಕ ಅಧಃಪತನಕ್ಕೆ ಬಲಿಯಾಗುತ್ತಿದ್ದಾರೆಂದು ಪೋಷಕರು ಆತಂಕಪಡುತ್ತಿದ್ದಾರೆ. ಹೀಗಿರುವಾಗ ಜನರಲ್ಲಿ ಜಾಗೃತಿಯನ್ನು ಮೂಡಿಸಲು, ಸಮಾಜದ ಬದಲಾವಣೆಯ ಹೋರಾಟಗಳಿಗೆ ಸ್ಫೂರ್ತಿ ತುಂಬಲು ಹೋರಾಟದ ಹಾಡುಗಳ ಕಾರ್ಯಗಾರಗಳು ನೆರವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಉದಯೋನ್ಮುಖ ಹಾಡುಗಾರರನ್ನು ಒಂದೆಡೆ ಸೇರಿಸಿ ಈ ಕಾರ್ಯಗಾರ ಹಮ್ಮಿಕೊಂಡಿರುವ ಯುವಜನ ಸಂಘಟನೆಯ ಪ್ರಯತ್ನ ಶ್ಲಾಘನೀಯ ಎಂದರು.
ನಂತರ ಮಾತನಾಡಿದ ಎಐಡಿಐಓ ಸಂಘಟನೆಯ ರಾಜ್ಯ ಕಾರ್ಯದರ್ಶಿಗಳಾದ ಸಿದ್ದಲಿಂಗ ಬಾಗೇವಾಡಿ ಅವರು ಸಮಾಜದ ಅನ್ಯಾಯಗಳ ವಿರುದ್ಧ ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಿರುವ ನಮ್ಮ ಸಂಘಟನೆಯು ತನ್ನ ಕಾರ್ಯಕರ್ತರಲ್ಲಿರುವ ಹಾಡುಗಾರರನ್ನು ಒಂದೆಡೆ ಸೇರಿಸಿ ಜನಜಾಗೃತಿ ಹಾಡುಗಳನ್ನು ಕಲಿಸುವ ಮತ್ತು ಇಲ್ಲಿಂದ ತಮ್ಮ ಸ್ಥಳಗಳಿಗೆ ಮರಳಿದ ನಂತರ ಅಲ್ಲಿಯೂ ಕೂಡ ಗಾಯನ ತಂಡಗಳನ್ನು ಕಟ್ಟುವ ಉತ್ಸಾಹದೊಂದಿಗೆ ಈ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು, ಎಲ್ಲ ಶಿಬಿರಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಯುವಜನ ಸಾಂಸ್ಕೃತಿಕ ವೇದಿಕೆಯ ಮುಖಂಡರಾದ ಕೃಷ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಐವತ್ತಕ್ಕೂ ಹೆಚ್ಚು ಪ್ರತಿನಿಧಿಗಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.