ಅಂಗನವಾಡಿ ಕೇಂದ್ರಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
ಲೋಕದರ್ಶನ ವರದಿ
ಮುಂಡಗೋಡ 22: ತಾಲೂಕಿನ ಹುನಗುಂದ ವಲಯದ ಇಂದೂರಿನ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಶುಕ್ರವಾರ ಕೃಷ್ಣ ಮತ್ತು ರಾಧೆಯರ ವೇಷ-ಭೂಷಣ ಧರಿಸಿ ವಿನೂತನ ಶೈಲಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಯಿತು.
ವಿಶೇಷವಾಗಿ ಅಂಗನವಾಡಿ ಕೇಂದ್ರ ನಂ.1ರ ಎಲ್ಲಾ ಮಕ್ಕಳನ್ನು ಟ್ರಾಕ್ಟರ್ನಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಸಾರ್ವಜನಿಕರು ಮಕ್ಕಳ ವೇಷ-ಭೂಷಣ ಕಂಡು ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳು ಮತ್ತು ಪಾಲಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಅಂಗನವಾಡಿ ಕೇಂದ್ರ ನಂ.1ರ ಕಾರ್ಯಕರ್ತೆ ಹೇಮಲತಾ ನಾಯ್ಕ ನೆನಪಿನ ಕಿರು ಕಾಣಿಕೆ ನೀಡಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹುನಗುಂದ ವಲಯದ ಮೇಲ್ವಿಚಾರಕಿ ಫಾತಿಮಾ ಕಿತ್ತೂರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಬಡಿಗೇರ, ಮಂಜುನಾಥ ನಡಿಗೇರ, ಪ್ರಿಯಾಂಕಾ ಕೊಟಗುಣಶಿ, ಕವಿತಾ ಬಡಿಗೇರ, ಕವಿತಾ ಸಣ್ಣೆಲ್ಲಪ್ಪನವರ, ಪವಿತ್ರಾ ರೆಡ್ಡಿ, ಮಹಾದೇವಿ ಸುರಗಿಮಠ, ಶಂಕ್ರವ್ವ ಕಣಕಣ್ಣನವರ, ರತ್ನಕ್ಕಾ ಈಳಿಗೇರ ಹಾಗೂ ಮುಂತಾದವರು ಉಪಸ್ಥಿತರಿದ್ದರು.