ಕಂಪ್ಲಿ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶ್ರೀ ರಾಮನವಮಿ ಆಚರಣೆ
ಲೋಕದರ್ಶನ ವರದಿ
ಕಂಪ್ಲಿ 27: ಪಟ್ಟಣದ ಸನಾಪೇಟೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶ್ರೀರಾಮ ನವಮಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಶ್ರೀರಾಮ ನವಮಿ ಅಂಗವಾಗಿ ಶ್ರೀಸಾಯಿಬಾಬಾ ಅವರ ಅಮೃತಶಿಲಾ ಮೂರ್ತಿಗೆ ಬೆಳಿಗ್ಗೆ ಕಾಕಡ ಆರತಿ,ಪಂಚಾಮೃತ ಅಭಿಷೇಕ, ಅಲಂಕಾರ,ಅಷ್ಟೋತ್ತರ ಹಾಗೂ ಮಹಾಮಂಗಳಾರತಿ ಮಾಡಲಾಯಿತು.
ನಂತರ ಪುರೋಹಿತರಾದ ರಾಜೇಂದ್ರ ಜ್ಯೋಷಿಯವರ ನೇತೃತ್ವದಲ್ಲಿ ಶ್ರೀರಾಮಚಂದ್ರ,ಲಕ್ಷ್ಮಣ ಹಾಗೂ ಸೀತೆಯ ಭಾವಚಿತ್ರಕ್ಕೆ ವಿವಿಧ ಅಭಿಷೇಕಗಳನ್ನು ಮಾಡಿ, ವಿವಿಧ ಹೂಗಳಿಂದ ಅಲಂಕರಿಸಿ ಮಹಾಮಂಗಳಾರತಿ ಮಾಡಿದರು.
ನಂತರ ಮಂದಿರಕ್ಕೆ ಆಗಮಿಸಿದ್ದ ಸಕಲ ಸದ್ಭಕ್ತರಿಗೆ ಶ್ರೀರಾಮ ನವಮಿಯ ಪ್ರಯುಕ್ತವಾಗಿ ತೀರ್ಥ, ಕೋಸಂಬರಿ, ಪಾನಕ ಹಾಗೂ ಸಿಹಿ ಪ್ರಸಾದವನ್ನು ವಿತರಿಸಿದರು. ಸಂಜೆ ಸಾಯಿಬಾಬಾ ಭಾವಚಿತ್ರಕ್ಕೆ ಚಂದನಾ ಸೇವೆ, ಸಂಧ್ಯಾರತಿ, ಪಲ್ಲಕ್ಕಿ ಸೇವೆ, ರಾತ್ರಿ ಶೇಷ ಆರತಿ ಕಾಯರಕ್ರಮಗಳು ಜರುಗಿದವು.