ಶ್ರೀಕೃಷ್ಣನ ಆದರ್ಶಗಳು ಯುವಜನತೆಗೆ ದಾರೀದೀಪ: ಎಸ್.ಆರ್. ಪಾಟೀಲ
ಬ್ಯಾಡಗಿ, ಸೆ.5: ಶ್ರೀಕೃಷ್ಣನು ನಮ್ಮ ಜೀವನಕ್ಕೆ ಅನೇಕ ಅಮೂಲ್ಯ ಸಂದೇಶಗಳನ್ನು ನೀಡಿದ್ದಾನೆ. ಧರ್ಮದ ಮಾರ್ಗದಲ್ಲಿ ನಡೆಯುವುದು, ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವುದು, ಸತ್ಯ ಮತ್ತು ನ್ಯಾಯವನ್ನು ಕಾಪಾಡುವುದು ಅವರ ಜೀವನದ ಪ್ರಮುಖ ಸಂದೇಶಗಳಾಗಿವೆ ಎಂದು ಗ್ಯಾರಂಟಿ ಯೋಜನೆಯ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಇಂದು ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ನಾವು ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯನ್ನು ಬೆಳೆಸಬೇಕು. ವಿಶೇಷವಾಗಿ ಯುವಜನತೆ ಶ್ರೀಕೃಷ್ಣನ ಆದರ್ಶಗಳನ್ನು ಅಳವಡಿಸಿಕೊಂಡು ಶಿಸ್ತು, ಶಿಕ್ಷಣ, ಪರಿಶ್ರಮ ಹಾಗೂ ಮಾನವೀಯತೆಯೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಭಗವದ್ಗೀತೆಯ ಮೂಲಕ ಶ್ರೀಕೃಷ್ಣ ನೀಡಿದ ಮಾರ್ಗದರ್ಶನ ಇಂದಿಗೂ ಇಡೀ ಮಾನವಕುಲಕ್ಕೆ ದಾರೀದೀಪವಾಗಿದೆ. “ನಿನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡು, ಫಲದ ಬಗ್ಗೆ ಚಿಂತಿಸಬೇಡ” ಎಂಬ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ತಹಶೀಲ್ದಾರ್ ಚಂದ್ರಶೇಖರ ನಾಯಕ ಮಾತನಾಡಿ, ಇಂದಿನ ಯುವಜನತೆ ಶ್ರೀಕೃಷ್ಣನ ಜೀವನ ಹಾಗೂ ಸಂದೇಶವನ್ನು ಅರಿತುಕೊಂಡು ಸಮಾಜದಲ್ಲಿ ಪ್ರೀತಿ, ಸೌಹಾರ್ದತೆ ಮತ್ತು ಮಾನವೀಯತೆಯನ್ನು ಬೆಳೆಸಬೇಕು. ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ, ಅಕ್ಷರ ದಾಸೋಹ ಅಧಿಕಾರಿ ವಸಂತ ಬಿರಣ್ಣನವರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಎಫ್. ನದಾಫ್, ತೋಟಗಾರಿಕೆ ಇಲಾಖೆ ಅಧಿಕಾರಿ ಅಶೋಕ ಕುರುಬರ, ಎಪಿಎಂಸಿ ನಿರ್ದೇಶಕ ಅವಿನಾಶ ಡಿ., ಲೋಕೋಪಯೋಗಿ ಇಲಾಖೆ ಅಧಿಕಾರಿ ಆಂಜನಯ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಮಾಜದ ಪ್ರಮುಖರು ಹಾಗೂ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.