ಮಹಲಿಂಗಪುರ

ಸೆ.25ರಿಂದ ಶ್ರೀ ಗುರು ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವ

ಸೆ.25ರಿಂದ ಶ್ರೀ ಗುರು ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವ

ಲೋಕದರ್ಶನ ವರದಿ 

ಮಹಾಲಿಂಗಪುರ 17 : ನಗರದ ಆರಾಧ್ಯ ದೈವ ಹಾಗೂ ಭಕ್ತರ ನಂಬಿಕೆಯ ಪ್ರತೀಕವಾಗಿರುವ ಶ್ರೀ ಗುರು ಮಹಾಲಿಂಗೇಶ್ವರ ದೇವರ ಪ್ರಸಕ್ತ ಸಾಲಿನ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಸೆ.25ರಿಂದ 28ರವರೆಗೆ ನಾಲ್ಕು ದಿನಗಳ ಕಾಲ ಧಾರ್ಮಿಕ ಹಾಗೂ ಸಾಂಪ್ರದಾಯಿಕ ವೈಭವದಿಂದ ಜಾತ್ರೆ ನಡೆಯಲಿದೆ. ಪ್ರತಿವರ್ಷ ಭಕ್ತಿಭಾವದಿಂದ ನಡೆಯುವ  ಗುರು ಮಹಾಲಿಂಗೇಶ್ವರ ಜಾತ್ರೆಯು ಮಹಾಲಿಂಗಪುರದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ. ಜಾತ್ರೆಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ರಥೋತ್ಸವದ ಸಂದರ್ಭದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಲಿದೆ.

ಸೆ.25ರಂದು ಶುಕ್ರವಾರ ಜಟೋತ್ಸವದೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಸೆ.26ರಂದು ಶನಿವಾರ ರಥೋತ್ಸವ ನಡೆಯಲಿದ್ದು, ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ಗುರು ಮಹಾಲಿಂಗೇಶ್ವರನ ದರ್ಶನ ಪಡೆದು ರಥೋತ್ಸವದ ವೈಭವ ಕಣ್ತುಂಬಿಕೊಳ್ಳಲಿದ್ದಾರೆ. ಸೆ.27ರಂದು ಭಾನುವಾರ ಮರು ರಥೋತ್ಸವ ನಡೆಯಲಿದೆ. ಜಾತ್ರೆಯ ಕೊನೆಯ ದಿನವಾದ ಸೆ.28ರಂದು ಸೋಮವಾರ ಸಾಂಪ್ರದಾಯಿಕ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ. ಉತ್ತರ ಕರ್ನಾಟಕದ ಗ್ರಾಮೀಣ ಕ್ರೀಡಾ ಪರಂಪರೆಯಲ್ಲಿ ವಿಶೇಷ ಸ್ಥಾನ ಪಡೆದಿರುವ ಕುಸ್ತಿ ಪಂದ್ಯಾವಳಿ ಜಾತ್ರೆಯ ಪ್ರಮುಖ ಆಕರ್ಷಣೆಯಾಗಲಿದೆ.

ನಾಲ್ಕು ದಿನಗಳ ಜಾತ್ರಾ ಮಹೋತ್ಸವದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಭಕ್ತಿ ಸಡಗರ, ಸಾಂಸ್ಕೃತಿಕ ಸಂಭ್ರಮ ಹಾಗೂ ಗ್ರಾಮೀಣ ಕ್ರೀಡಾ ವೈಭವ ಒಂದೆಡೆ ಸೇರಲಿದೆ. ಸುತ್ತಮುತ್ತಲಿನ ಗ್ರಾಮಗಳು ಹಾಗೂ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುವ ನೀರೀಕ್ಷೆಯಿದ್ದು, ಮಹಾಲಿಂಗಪುರದಲ್ಲಿ ಹಬ್ಬದ ವಾತಾವರಣ ಕಳೆಗಟ್ಟಲಿದೆ. ಶ್ರೀ ಗುರು ಮಹಾಲಿಂಗೇಶ್ವರನ ಕೃಪಾಶೀರ್ವಾದ ಎಲ್ಲ ಭಕ್ತರ ಮನೆ-ಮನಗಳಲ್ಲಿ ನೆಲೆಸಲಿ, ಜಾತ್ರಾ ಮಹೋತ್ಸವವು ಭಕ್ತಿ, ಶಾಂತಿ ಹಾಗೂ ಸೌಹಾರ್ದತೆಯ ಸಂದೇಶ ಸಾರಲಿ ಎಂಬುದು ಭಕ್ತರ ಆಶಯವಾಗಿದೆ.  


ಸುದ್ದಿ ಓದಿ