ಕ್ರೀಡೆಯಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು ವೃದ್ಧಿ
ಲೋಕದರ್ಶನ ವರದಿ
ಬೆಳಗಾವಿ 01: ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನದಲ್ಲಿ ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಕ್ರೀಡೆಯಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ದೃಢತೆ, ಆತ್ಮವಿಶ್ವಾಸ, ಶಿಸ್ತು, ನಾಯಕತ್ವ ಹಾಗೂ ತಂಡದ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯ ಎಂದು ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕ್ರೀಡಾ ನಿರ್ದೇಶಕ ಡಾ. ಜಗದೀಶ್ ಗಸ್ತಿ ಹೇಳಿದರು. ನಗರದ ಡಿ.ವೈ. ಸ್ಪೋರ್ಟ್ಸ ಹಾಸ್ಟೆಲ್ನಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಅಂಜುಮನ್ ಆರ್ಟ್ಸ ಆ್ಯಂಡ್ ಕಾಮರ್ಸ್ ಡಿಗ್ರಿ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಜೂಡೋ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೂ ಸಮಾನ ಆದ್ಯತೆ ನೀಡಬೇಕು. ಕ್ರೀಡೆಯನ್ನು ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡು ಸಾಧನೆಯತ್ತ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಸ್ಪರ್ಧೆಯಲ್ಲಿ ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ವಿವಿಧ ಕಾಲೇಜುಗಳನ್ನು ಪ್ರತಿನಿಧಿಸಿದ ಸುಮಾರು 40 ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ವಿವಿಧ ವಿಭಾಗಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಜೂಡೋ ಕೌಶಲ್ಯ ಪ್ರದರ್ಶಿಸಿದರು. ಕ್ರೀಡಾಪಟುಗಳು ಶಿಸ್ತು, ಪರಿಶ್ರಮ, ಆತ್ಮವಿಶ್ವಾಸ, ದೃಢಸಂಕಲ್ಪ ಹಾಗೂ ಕ್ರೀಡಾಸ್ಫೂರ್ತಿ ಮೆರೆದರು.
ಅಂಜುಮನ್ ಆರ್ಟ್ಸ ಆ್ಯಂಡ್ ಕಾಮರ್ಸ್ ಡಿಗ್ರಿ ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಎಂ. ಖತೀಬ್ ಮಾತನಾಡಿ, ವಿಶ್ವವಿದ್ಯಾಲಯದ ಸಹಯೋಗದಲ್ಲಿ ಜೂಡೋ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಿರುವುದು ಸಂತಸ ತಂದಿದೆ. ಇಂತಹ ಕ್ರೀಡಾ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವ, ಶಿಸ್ತು, ಆತ್ಮವಿಶ್ವಾಸ ಹಾಗೂ ಕ್ರೀಡಾಸ್ಫೂರ್ತಿ ಬೆಳೆಸಲು ಸಹಕಾರಿಯಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಜೆ.ಎ. ಜಾಗೀರ್ದಾರ್, ಐಕ್ಯೂಎಸಿ ಸಂಯೋಜಕ ಡಾ. ಇಫಾನ್, ಮುಖ್ಯ ತರಬೇತುದಾರರಾದ ಕು. ರೋಹಿಣಿ ಪಾಟೀಲ ಸೇರಿದಂತೆ ಕ್ರೀಡಾ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.